ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಅವರೇ ‘ವೈಟ್ ಚಾಲೆಂಜ್’ಗೆ ಸಿದ್ಧವೇ? ಹೈದರಾಬಾದ್‌ನಲ್ಲಿ ಬ್ಯಾನರ್‌ಗಳು

Last Updated 5 ಮೇ 2022, 13:19 IST
ಅಕ್ಷರ ಗಾತ್ರ

ಹೈದರಾಬಾದ್‌: ‘ರಾಹುಲ್‌ ಗಾಂಧಿಯವರೇ ನೀವು ‘ವೈಟ್ ಚಾಲೆಂಜ್ (ಡ್ರಗ್ಸ್‌ ಪರೀಕ್ಷೆ)’ಗೆ ಸಿದ್ಧರಿದ್ದೀರಾ’ ಎಂದು ಕೇಳಲಾದ ಬ್ಯಾನರ್‌ಗಳನ್ನು ಹೈದರಾಬಾದ್‌ನಲ್ಲಿ ಹಾಕಲಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ ಹೈದರಾಬಾದ್‌ಗೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಹಾಕಿರುವ ಈ ಬ್ಯಾನರ್‌ಗಳು ಪಕ್ಷಕ್ಕೆ ಮುಜುಗರ ಉಂಟು ಮಾಡಿವೆ.

ಹೈದರಾಬಾದ್‌ನ ಕೇಂದ್ರ ಸ್ಥಾನ ಎಂದು ಕರೆಯಲ್ಪಡುವ ಹುಸೇನ್‌ ಸಾಗರ್‌ ಲೇಕ್‌ ಪ್ರದೇಶದಲ್ಲಿ ಈ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಬ್ಯಾನರ್‌ ಹಾಕಿದವರು ಯಾರು ಎಂದು ಬ್ಯಾನರ್‌ಗಳಲ್ಲಿ ಉಲ್ಲೇಖಿಸಿಲ್ಲ. ಆದರೆ, ಕಳೆದ ಸೆಪ್ಟೆಂಬರ್‌ನಲ್ಲಿ ರಾಹುಲ್‌ ಗಾಂಧಿ ಅವರಿಗೆ ‘ವೈಟ್‌ ಚಾಲೆಂಜ್‌’ ಹಾಕಿದ್ದ ತೆಲಂಗಾಣದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಅವರ ಬೆಂಬಲಿಗರೇ ಇವುಗಳನ್ನು ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಲು ತಾವು ‘ವೈಟ್ ಚಾಲೆಂಜ್’ ಆರಂಭಿಸುತ್ತಿರುವುದಾಗಿ ರೇವಂತ್ ರೆಡ್ಡಿ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಇದರಲ್ಲಿ ಭಾಗವಹಿಸಲು ತೆಲಂಗಾಣದ ಹುತಾತ್ಮರ ಸ್ಮಾರಕಕ್ಕೆ ಹಾಜರಾಗುವಂತೆ ಕೆಟಿಆರ್‌ಗೆ ರೇವಂತ್‌ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೆಟಿಆರ್‌, ‘ನಾನು ಯಾವುದೇ ಪರೀಕ್ಷೆಗೆ ಸಿದ್ಧನಿದ್ದೇನೆ. ರಾಹುಲ್ ಗಾಂಧಿ ಅವರೂ ನನ್ನೊಂದಿಗೆ ಪರೀಕ್ಷೆಗೆ ಸಿದ್ಧರಿದ್ದರೆ ನಾನು ದೆಹಲಿಯ ಏಮ್ಸ್‌ ಆಸ್ಪತ್ರೆಗೇ ತೆರಳುತ್ತೇನೆ. ಆದರೆ, ಚೆರ್ಲಪಲ್ಲಿ ಜೈಲಿನಲ್ಲಿದ್ದು ಬಂದವರೊಂದಿಗೆ ಪರೀಕ್ಷೆಗೆ ಒಳಗಾಗುವುದು ನನ್ನ ಘನತೆಗೆ ತಕ್ಕುದಲ್ಲ. ನಾನು ಪರೀಕ್ಷೆಗೆ ಹಾಜರಾಗಿ, ಕ್ಲೀನ್ ಚಿಟ್ ಪಡೆದರೆ, ನೀವು (ರೇವಂತ್‌ ರೆಡ್ಡಿ) ಕ್ಷಮೆಯಾಚಿಸುವಿರಾ? ನಿಮ್ಮ ಸ್ಥಾನ ತೊರೆಯುವಿರಾ?’ ಎಂದು ಕೆಟಿಆರ್‌ ಸೆಪ್ಟೆಂಬರ್‌ನಲ್ಲಿ ಟ್ವೀಟ್‌ ಮಾಡಿದ್ದರು. ವೋಟಿಗಾಗಿ ನೋಟು ಪ್ರಕರಣದಲ್ಲಿ ರೇವಂತ್ ರೆಡ್ಡಿ ಅವರು ಬಂಧನಕ್ಕೀಡಾಗಿದ್ದರು.

ಹೈದರಾಬಾದ್‌ನಲ್ಲಿ ಪತ್ತೆಯಾದ ಡ್ರಗ್ಸ್ ದಂಧೆಯಲ್ಲಿ ಕೆಟಿಆರ್‌ ಅವರ ಪಾತ್ರವಿದೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿದ ಕೆಟಿಆರ್, ತಾನು ಡ್ರಗ್ಸ್‌ ಪರೀಕ್ಷೆಗೆ ಸಿದ್ಧ ಎಂದು ಹೇಳಿದ್ದರು. ಅಲ್ಲದೇ, ರಾಹುಲ್ ಗಾಂಧಿ ಕೂಡ ಪರೀಕ್ಷೆಗೆ ಮಾದರಿ ನೀಡುತ್ತಾರಾ ಎಂದು ಕೇಳಿದ್ದರು.

ಈಗ ಅದೇ ಸವಾಲನ್ನು ಮತ್ತೊಮ್ಮೆ ಮುಂದಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿ ನಗರದಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಎರಡು ದಿನಗಳ ಭೇಟಿಗಾಗಿ ರಾಹುಲ್ ಗಾಂಧಿ ಶುಕ್ರವಾರ ಹೈದರಾಬಾದ್‌ಗೆ ಆಗಮಿಸುತ್ತಿದ್ದಾರೆ. ಅವರು ವಾರಂಗಲ್‌ಗೆ ತೆರಳಿ ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶನಿವಾರ ಹೈದರಾಬಾದ್‌ನಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT