ಮಂಗಳವಾರ, ಡಿಸೆಂಬರ್ 7, 2021
24 °C

ಭಾರತದಲ್ಲಿ ಕೋವಿಡ್‌ನ 3ನೇ ಅಲೆ ಬರುವ ಸಾಧ್ಯತೆಗಳಿವೆಯೇ? ಏನನ್ನುತ್ತಾರೆ ತಜ್ಞರು?

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ಲಸಿಕೆ ನಂತರದ ರೋಗನಿರೋಧಕ ಶಕ್ತಿಯಿಂದಲೂ ತಪ್ಪಿಸಿಕೊಳ್ಳುವ ಸಾಮರ್ಥ್ಯವಿರುವ ಕೊರೊನಾ ವೈರಸ್‌ನ ರೂಪಾಂತರ ಮಾದರಿಯೊಂದು ಸೃಷ್ಟಿಯಾಗದ ಹೊರತು ಭಾರತವು ವಿನಾಶಕಾರಿ ಎರಡನೇ ಅಲೆಯಂಥ ಸಂಕಷ್ಟದ ಪರಿಸ್ಥಿತಿಯೊಂದನ್ನು  ಎದುರಿಸುವ ಸಾಧ್ಯತೆಗಳಿಲ್ಲ. ಆದರೆ, ಈಗ ವರದಿಯಾಗುತ್ತಿರುವ ಕಡಿಮೆ ಪ್ರಕರಣಗಳು ಸಾಂಕ್ರಾಮಿಕದ ಅಂತ್ಯವಾಗಿದೆ ಎಂದಲ್ಲ ಎಂದು ತಜ್ಞರ ತಂಡ ಶುಕ್ರವಾರ ಎಚ್ಚರಿಕೆ ನೀಡಿದೆ. 

‘ಕೋವಿಡ್‌ನ ದೊಡ್ಡ ಅಲೆಯೊಂದು ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ’ ಎಂದು ತಜ್ಞರು ಹೇಳಿದ್ದರೂ, ಹಬ್ಬದ ಋತುವನ್ನು ಹಿನ್ನೆಲೆಯಾಗಿಟ್ಟುಕೊಂಡು ಎಚ್ಚರಿಕೆ ನೀಡಿದ್ದಾರೆ. ಕೋವಿಡ್‌ ಪ್ರಕರಣಗಳು ಕಡಿಮೆಯಾಗಿರಬಹುದು. ಆದರೆ, ಸಾವಿನ ಪ್ರಮಾಣ ಹೆಚ್ಚಿದೆ. ದೊಡ್ಡ ಮಟ್ಟದ ಲಸಿಕಾ ಅಭಿಯಾನದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಅಲ್ಲದೆ, ಬ್ರಿಟನ್‌ನಲ್ಲಿ ಕೋವಿಡ್‌ ಮತ್ತೆ ಕಾಣಿಸಿಕೊಂಡಿರುವುದನ್ನು ಉದಾಹರಣೆಯಾಗಿ ನೀಡಿ ಜಾಗರೂಕರಾಗಿರುವಂತೆ ತಿಳಿಸಿದ್ದಾರೆ.  

ಭಾರತವು 100 ಕೋಟಿ ಕೋವಿಡ್ ಲಸಿಕೆ ಮೈಲಿಗಲ್ಲನ್ನು ತಲುಪಿದ ಹಿನ್ನೆಲೆಯಲ್ಲಿ ಮಾತನಾಡಿರುವ ಖ್ಯಾತ ವೈರಾಣು ತಜ್ಞ ಶಾಹಿದ್ ಜಮೀಲ್, ‘ಲಸಿಕೆ ನೀಡುವ ಕೆಲಸ ಗಮನಾರ್ಹವಾಗಿ ಸುಧಾರಿಸಿದೆ. ಆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡುವ ಅಗತ್ಯವಿದೆ,‘ ಎಂದು ಅಭಿಪ್ರಾಯಪಟ್ಟಿದ್ಧಾರೆ.  

 ‘ಕೋವಿಡ್‌ನ ಅಂತ್ಯ ಸ್ಥಿತಿಗೆ ಬಂದಿದ್ದೇವೆಯೇ ಎಂಬುದರ ಬಗ್ಗೆ ನನಗೆ ಖಾತ್ರಿ ಇಲ್ಲ. ಈ (100 ಕೋಟಿ) ಹೆಗ್ಗುರುತನ್ನು ಸಂಭ್ರಮಿಸುತ್ತಿರುವಾಗಲೇ, ನಾವು ಸಾಗಬೇಕಾದ ದೂರ ಇನ್ನಷ್ಟಿದೆ ಎಂದು ಅನಿಸುತ್ತಿದೆ. ನಾವು ಪಿಡುಗಿನ ಅಂತ್ಯ ಸ್ಥಿತಿಗೆ ಸಾಗುತ್ತಿದ್ದೇವೆ. ಆದರೆ ತಲುಪಿಲ್ಲ’ ಎಂದು ಹರಿಯಾಣ ಅಶೋಕ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಜಮೀಲ್ ಪಿಟಿಐಗೆ ಇಮೇಲ್ ಸಂದರ್ಶನದಲ್ಲಿ ಹೇಳಿದರು.

ದೇಶದಲ್ಲಿ ಮರಣ ಪ್ರಮಾಣವು ಶೇಕಡಾ 1.2 ರಷ್ಟಿದೆ ಎಂದು ಜಮೀಲ್‌ ತಿಳಿಸಿದರು. ದೇಶದಲ್ಲಿ ಲಸಿಕೆ ನೀಡುವ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎಂಬುದು ಇದರ ಅರ್ಥ ಎಂದು ಅವರು ವಿವರಿಸಿದರು.      

‘ಕೋವಿಡ್‌ ಪಿಡುಗಿನ ಅಂತ್ಯದ ಬಗ್ಗೆ ಕೆಲವು ಗೊಂದಲಮಯ ವಾದಗಳಿವೆ. ಕಡಿಮೆ ಪ್ರಕರಣಗಳು ಕೆಲವೊಮ್ಮೆ ಪಿಡುಗಿನ ಅಂತ್ಯವನ್ನು ಸೂಚಿಸುವುದಿಲ್ಲ. ದೇಶದ ಕೆಲವು ಭಾಗಗಳಲ್ಲಿ ಪಿಡುಗು ಇನ್ನೇನು ಅಂತ್ಯಗೊಳ್ಳುವ ಹಂತದಲ್ಲಿರುವ ಸಾಧ್ಯತೆಗಳಿವೆ. ಆದರೆ ಅದನ್ನು ದೃಢೀಕರಿಸಲು ಅಗತ್ಯವಿರುವ ದತ್ತಾಂಶ (ಡೇಟಾ)ಗಳು ಸುಲಭವಾಗಿ ಸಿಗುವುದಿಲ್ಲ. ಉದಾಹರಣೆಗೆ,  ಭಾರತದಲ್ಲಿ ಲಸಿಕೆ ಪಡೆದ ಎಷ್ಟು ಮಂದಿಗೆ ಸೋಂಕು ತಗುಲಿದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇಲ್ಲ,’ ಎಂದು ಭಾರತದ ಕೋವಿಡ್ ಪ್ರಕರಣಗಳ ಏರಿಳಿತವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಲಂಡನ್‌ ‘ಮಿಡ್ಲ್‌ಸೆಕ್ಸ್ ವಿಶ್ವವಿದ್ಯಾಲಯ’ದ ಗಣಿತದ ಹಿರಿಯ ಉಪನ್ಯಾಸಕ ಮುರಾದ್ ಬಣಜಿ ಅಭಿಪ್ರಾಯಪಟ್ಟಿದ್ಧಾರೆ.  

 ‘ಪಿಡುಗಿನ ಅಂತ್ಯ ಹೇಗಿರಬಹುದು ಅಥವಾ ಕೋವಿಡ್‌ ಯಾವ ಮಟ್ಟದಲ್ಲಿ ಇರಲಿದೆ ಎಂಬುದನ್ನು ಯಾರೂ ನಿರೀಕ್ಷಿಸಲು ಆಗದು. ಆದರೆ, ಕೋವಿಡ್‌ ಅನ್ನು ನಿಯಂತ್ರಿಸುವ ಕ್ರಮಗಳು ಇನ್ನೂ ಕೆಲವು ವರ್ಷಗಳ ಕಾಲ ಚಾಲ್ತಿಯಲ್ಲಿರಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಬ್ರಿಟನ್‌ನಂತೆ ಭಾರತದಲ್ಲೂ ಆಗಗಾಗ್ಗೇ ಸೋಂಕು ಹೆಚ್ಚಾಗುವ ಸಾಧ್ಯತೆಗಳು ಇರಲಿವೆ’ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ರಮಣನ್ ಲಕ್ಷ್ಮಿನಾರಾಯಣ ಹೇಳಿದ್ಧಾರೆ. 

‘ಕೋವಿಡ್ -19 ಭಾರತಕ್ಕೆ ದೊಡ್ಡ ಬೆದರಿಕೆಯೊಂದನ್ನು ಒಡ್ಡಲಿದೆಯೇ ಎಂದು ನಿರ್ಧರಿಸಲು ನಾವು ಇನ್ನೂ ಎರಡು ತಿಂಗಳು ಕಾಯಬೇಕಾಗುತ್ತದೆ’ ಎಂದು ವಾಷಿಂಗ್ಟನ್‌ನ ‘ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಮತ್ತು ಪಾಲಿಸಿ’ಯ ನಿರ್ದೇಶಕ ಲಕ್ಷ್ಮಿನಾರಾಯಣ ಅವರು ಇಮೇಲ್ ಸಂದರ್ಶನದಲ್ಲಿ ಪಿಟಿಐಗೆ ತಿಳಿಸಿದ್ದಾರೆ. 

ಬ್ರಿಟನ್‌ನಲ್ಲಿ ಸೆಪ್ಟೆಂಬರ್ ಮಧ್ಯದಲ್ಲಿ ದಿನಕ್ಕೆ ಸುಮಾರು 30,000 ಪ್ರಕರಣಗಳಿಂದ 50,000 ಪ್ರಕರಣಗಳಿಗೆ ಹೆಚ್ಚಾಗಿದೆ. ಜುಲೈ ಮಧ್ಯಭಾಗದಲ್ಲಿ ಮರಣ ಪ್ರಮಾಣವು ಶೇ 2 ರಿಂದ 0.2ಗೆ ಕುಸಿಯಿತು ಎಂಬುದನ್ನು ಜಮೀಲ್‌ ಗಮನಿಸಿದ್ದಾರೆ. 

ಅಮೆರಿಕದಲ್ಲಿ ಸೆಪ್ಟೆಂಬರ್ ಆರಂಭದಲ್ಲಿ ದಿನಕ್ಕೆ ಸುಮಾರು 2,00,000 ಪ್ರಕರಣಗಳಿಗೆ ತಲುಪಿತ್ತು. ನಂತರ ಪ್ರಕರಣಗಳು 80,000 ಕ್ಕೆ ಇಳಿದಿವೆ. ಆದಾಗ್ಯೂ, ಮರಣ ಪ್ರಮಾಣವು ವರ್ಷದ ಹಿಂದಿನಂತೆಯೇ ಇದೆ ಎಂದು ಅವರು ವಿವರಿಸಿದ್ಧಾರೆ. 

ತಜ್ಞರು ಹೇಳುವಂತೆ ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ಆಗಾಗ್ಗೇ ಸೋಂಕು ಉಲ್ಬಣಗೊಳ್ಳಬಹುದು. ಆದರೆ, ಎರಡನೇ ಅಲೆಯಲ್ಲಿ ಆದಂಥ ಅನಾಹುತಗಳು, ವೈದ್ಯಕೀಯ ವ್ಯವಸ್ಥೆಯ ಕುಸಿತ ಉಂಟಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ಧಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು