ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಸಂಪುಟ ವಿಸ್ತರಣೆ: 31 ಸಚಿವರು ಪ್ರಮಾಣ ವಚನ

ನಿತೀಶ್‌, ತೇಜಸ್ವಿ ಬಳಿ ಪ್ರಮುಖ ಖಾತೆಗಳು
Last Updated 16 ಆಗಸ್ಟ್ 2022, 15:37 IST
ಅಕ್ಷರ ಗಾತ್ರ

ಪಟ್ನಾ:ನಿತೀಶ್‌ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ಅವರ ನೇತೃತ್ವದ ಬಿಹಾರ ಸರ್ಕಾರದ ಸಂಪುಟ ವಿಸ್ತರಣೆ ಮಂಗಳವಾರ ನಡೆದಿದ್ದು, ಮೂವರು ಮಹಿಳಾ ಶಾಸಕರು ಸೇರಿ 31ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ರಾಜ್ಯಪಾಲ ಫಗು ಚೌಹಾಣ್‌ ಅವರು ಪ್ರಮಾಣ ವಚನ ಬೋಧಿಸಿದರು. ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಖಾತೆ ಹಂಚಿಕೆಯೂ ಆಗಿದೆ. ಸಿಎಂ ನಿತೀಶ್‌ ಗೃಹ ಖಾತೆ ಸೇರಿ ಸಾಮಾನ್ಯ ಆಡಳಿತ, ಸಂಪುಟ ಸಚಿವಾಲಯ,ಚುನಾವಣೆ ಮತ್ತು ಇತರ ಪ್ರಮುಖ ಕೆಲವು ಇಲಾಖೆಗಳ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಡಿಸಿಎಂ ತೇಜಸ್ವಿ ಪ್ರಸಾದ್‌ ಯಾದವ್‌ ಅವರು ಆರೋಗ್ಯ, ರಸ್ತೆ ನಿರ್ಮಾಣ, ನಗರ ವಸತಿ ಮತ್ತು ಅಭಿವೃದ್ಧಿ ಹಾಗೂ ಗ್ರಾಮೀಣ ಕಾಮಗಾರಿಗಳನ್ನು ಖಾತೆ ಹೊಂದಿದ್ದಾರೆ. ಇವರ ಅಣ್ಣ ತೇಜ್‌ ಪ್ರತಾಪ್‌ ಯಾದವ್‌ ಅವರಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಿಕ್ಕಿದೆ.

ಜೆಡಿಯುನ ಪ್ರಭಾವಿ ನಾಯಕರಾದ ವಿಜಯ್‌ ಕುಮಾರ್‌ ಚೌಧರಿ (ಹಣಕಾಸು, ವಾಣಿಜ್ಯ ತೆರಿಗೆ ಮತ್ತು ಸಂಸದೀಯ ವ್ಯವಹಾರಗಳು) ಮತ್ತು ಬಿಜೇಂದ್ರ ಯಾದವ್‌ (ಇಂಧನ ಮತ್ತು ಪ್ಲಾನಿಂಗ್‌ ಹಾಗೂ ಅಭಿವೃದ್ಧಿ), ಸಂಜಯ್‌ ಕುಮಾರ್‌ ಝಾ (ಜಲಸಂಪನ್ಮೂಲ ಮತ್ತು ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ)ಶೀಲಾ ಕುಮಾರಿ (ಸಾರಿಗೆ), ಲೇಶಿ ಸಿಂಗ್‌ (ಆಹಾರ ಮತ್ತು ಗ್ರಾಹಕ ರಕ್ಷಣೆ) ಹಾಗೂ ಅನಿತಾ ದೇವಿ ಅವರಿಗೆ (ಒಬಿಸಿ ಮತ್ತು ಇಬಿಸಿ ವೆಲ್‌ಫೇರ್‌) ಪ್ರಮುಖ ಖಾತೆಗಳು ಸಿಕ್ಕಿವೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್‌ ಯಾದವ್‌ ಆ.10ರಂದೇ ಪ್ರಮಾಣ ವಚನ ಸ್ವೀಕರಿಸಿದ್ದರು.

ಆರ್‌ಜೆಡಿಯಿಂದ 16, ಜೆಡಿಯುನಿಂದ 11, ಕಾಂಗ್ರೆಸ್‌ನಿಂದ ಇಬ್ಬರು, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದ (ಎಚ್‌ಎಎಂ) ಒಬ್ಬರು ಮತ್ತು ಒಬ್ಬ ಪಕ್ಷೇತರ ಶಾಸಕರು ಸಚಿವ ಸ್ಥಾನ ಅಲಂಕರಿಸಿದರು. ನಿತೀಶ್‌ ಸಂಪುಟದಲ್ಲಿ ಐವರು ಮುಸ್ಲಿಂ ಶಾಸಕರಿಗೂ ಸ್ಥಾನ ಸಿಕ್ಕಿದೆ. ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಒಬ್ಬರು ಮುಸ್ಲಿಂ ಶಾಸಕರಿಗಷ್ಟೇ ಸಚಿವ ಸ್ಥಾನ ನೀಡಲಾಗಿತ್ತು.

ಶಾಸಕರ ಸಂಖ್ಯಾಬಲದಲ್ಲಿ ದೊಡ್ಡ ಪಕ್ಷವೆನಿಸಿರುವ ಆರ್‌ಜೆಡಿಯು ಸಹಜವಾಗಿಯೇ ಸಂಪುಟದಲ್ಲೂ ಸಿಂಹಪಾಲು ಗಿಟ್ಟಿಸಿಕೊಂಡಿದೆ. ಅಲ್ಪಸಂಖ್ಯಾತರು ಸೇರಿ ಸಮಾಜದ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ನೀಡುವ ಕಸರತ್ತನ್ನು ‘ಮಹಾಘಟಬಂಧನ್‌’ ಸರ್ಕಾರ ಮಾಡಿದೆ.

ಲಾಲು ಪ್ರಸಾದ್ ಅವರ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಸೇರಿ ಯಾದವ ಸಮುದಾಯದ ಏಳು ಶಾಸಕರಿಗೆ, ಭೂಮಿಹಾರ ಸಮುದಾಯಕ್ಕೆ ಸೇರಿದ ಕಾರ್ತಿಕೇಯ ಸಿಂಗ್ ಮತ್ತು ರಜಪೂತ ಸಮುದಾಯದ ಸುಧಾಕರ್ ಸಿಂಗ್ ಅವರಿಗೂಆರ್‌ಜೆಡಿ ಕೋಟಾದಿಂದ ಸಚಿವ ಸ್ಥಾನ ಸಿಕ್ಕಿದೆ.

ಜೆಡಿಯು ತನ್ನ ಹಿಂದಿನ ಸರ್ಕಾರದಲ್ಲಿದ್ದವರನ್ನೇ ಸಚಿವರನ್ನಾಗಿ ಉಳಿಸಿಕೊಂಡಿದೆ. ಕಾಂಗ್ರೆಸ್‌ ಕೋಟಾದ ಎರಡು ಸಚಿವ ಸ್ಥಾನಗಳಲ್ಲಿ ಒಂದು ದಲಿತ ಶಾಸಕರಿಗೆ ಮತ್ತು ಇನ್ನೊಂದು ಮುಸ್ಲಿಂ ಶಾಸಕರಿಗೆ ನೀಡಲಾಗಿದೆ.

ಸ್ಪೀಕರ್‌ ವಿರುದ್ಧ ಅವಿಶ್ವಾಸ ಮಂಡನೆ: ಇದೇ ವೇಳೆ,ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡ ಮಹಾಮೈತ್ರಿಯು (ಮಹಾಘಟಬಂಧನ್‌), ಬಿಜೆಪಿಯವರಾದ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ.

ಬಿಜೆಪಿ ನಾಯಕರ ಸಭೆ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳ ಬಳಿಕ ಬಿಜೆಪಿ ಕೇಂದ್ರ ನಾಯಕರ ಸಭೆ ಮಂಗಳವಾರ ನವದೆಹಲಿಯಲ್ಲಿ ನಡೆದಿದೆ.

2024ರ ಲೋಕಸಭಾ ಚುನಾವಣೆಯ ಕಾರ್ಯತಂತ್ರ ಮತ್ತು ಬಿಜೆಪಿಯ ಮುಂದಿನ ನಡೆಯ ಬಗ್ಗೆ, ಸಾಂಸ್ಥಿಕ ಬದಲಾವಣೆಗಳ ಕುರಿತುನಾಯಕರು ಸಭೆಯಲ್ಲಿ ಚರ್ಚೆಯಾಗಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT