ಗುರುವಾರ , ನವೆಂಬರ್ 26, 2020
21 °C

ವಂಚನೆಯಿಂದ ಎನ್‌ಡಿಎಗೆ ಗೆಲುವು: ತೇಜಸ್ವಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ಮಾಧ್ಯಮಗೋಷ್ಠಿಗೆ ಬಂದ ತೇಜಸ್ವಿ ಯಾದವ್‌ (ಬಲ) ಮತ್ತು ಅವರ ಅಣ್ಣ ತೇಜ್‌ ಪ್ರತಾಪ್‌ -ಪಿಟಿಐ ಚಿತ್ರ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ವಂಚನೆಯ ಮೂಲಕ ಗೆಲುವು ಸಾಧಿಸಿದೆ ಎಂದು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಆರೋಪಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಪಕ್ಷವೊಂದರ ಮುಖ್ಯಸ್ಥರು ತಮ್ಮ ಆತ್ಮಸಾಕ್ಷಿಗೆ ಓಗೊಟ್ಟು ಕುರ್ಚಿ ಮೋಹವನ್ನು ಬಿಡುತ್ತಾರೆಯೇ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರನ್ನು ಉಲ್ಲೇಖಿಸಿ ತೇಜಸ್ವಿ ಪ್ರಶ್ನಿಸಿದ್ದಾರೆ.

2015ರ ಚುನಾವಣೆಯಲ್ಲಿ ನಿತೀಶ್‌ ಅವರ ಜೆಡಿಯು, ಮಹಾಮೈತ್ರಿಕೂಟದ ಭಾಗವಾಗಿತ್ತು. ಚುನಾವಣೆ ಬಳಿಕ ಈ ಮೈತ್ರಿಕೂಟವು ರಚಿಸಿದ್ದ ಸರ್ಕಾರದಲ್ಲಿ ನಿತೀಶ್‌ ಮುಖ್ಯಮಂತ್ರಿ ಮತ್ತು ತೇಜಸ್ವಿ ಉಪಮುಖ್ಯಮಂತ್ರಿ ಆಗಿದ್ದರು. ಆದರೆ, 2017ರಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತೇಜಸ್ವಿ ಹೆಸರು ಕೇಳಿ ಬಂದಿತ್ತು. ಬಳಿಕ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮೈತ್ರಿಕೂಟದಿಂದ ಹೊರಕ್ಕೆ ಹೋಗುವುದಾಗಿ ನಿತೀಶ್‌ ಹೇಳಿದ್ದರು. 

ಈ ಬಾರಿಯ ಜನಾದೇಶವು ಬದಲಾವಣೆಯ ಪರವಾಗಿದೆ. ಆದರೆ, ಅದನ್ನು ತಿರುಚಲಾಗಿದೆ ಎಂದು ಮಹಾಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ತೇಜಸ್ವಿ ಹೇಳಿದ್ದಾರೆ. 

‘ಇದು ಬದಲಾವಣೆಯ ಪರವಾದ ಜನಾದೇಶ ಎಂಬುದು ನಿಸ್ಸಂಶಯ. ಧನಬಲ, ತೋಳ್ಬಲ ಮತ್ತು ವಂಚನೆಯ ಮೂಲಕ ಎನ್‌ಡಿಎ ಗೆದ್ದಿದೆ’ ಎಂದು ಅವರು ಆರೋಪಿಸಿದ್ದಾರೆ. 

ಸರ್ಕಾರ ರಚಿಸಲು ಸಂಖ್ಯಾಬಲವನ್ನು ಒಗ್ಗೂಡಿಸಲು ಮಹಾಮೈತ್ರಿಕೂಟ ಯತ್ನಿಸುವುದೇ ಎಂಬ ಪ್ರಶ್ನೆಗೆ, ‘ನಾವು ಜನರ ಬಳಿಗೆ ಹೋಗುತ್ತೇವೆ. ಜನರ ಇಚ್ಛೆ ಹಾಗಿದೆ ಎಂದಾದರೆ ಅದಕ್ಕೆ ಯತ್ನ ಮಾಡುತ್ತೇವೆ’ ಎಂದು ಉತ್ತರಿಸಿದರು. 

ಮಹಾಮೈತ್ರಿಕೂಟಕ್ಕಿಂತ 12,270 ಮತಗಳಷ್ಟೇ ಎನ್‌ಡಿಎಗೆ ಹೆಚ್ಚು ದೊರೆತಿದೆ ಎಂದು ಅವರು ಹೇಳಿದರು.

‘ಈ ಅಲ್ಪ ಅಂತರವು ಅವರಿಗೆ ನಮಗಿಂತ 15 ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ತಂದು ಕೊಡಲು ಹೇಗೆ ಸಾಧ್ಯ? ಮತ ಎಣಿಕೆಯು ನ್ಯಾಯಯುತವಾಗಿ ನಡೆದಿದ್ದರೆ ನಮಗೆ 130 ಕ್ಷೇತ್ರಗಳಲ್ಲಿ ಗೆಲುವು ದೊರೆಯುತ್ತಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. 

‘ಅಂಚೆ ಮತಗಳನ್ನು ಆರಂಭದಲ್ಲಿಯೇ ಎಣಿಸುವುದು ಕ್ರಮ. ಆದರೆ, ಹಲವು ಕ್ಷೇತ್ರಗಳಲ್ಲಿ ಅಂಚೆ ಮತಗಳನ್ನು ಕೊನೆಗೆ ಎಣಿಸಲಾಗಿದೆ. ಕೆಲವು ಕ್ಷೇತ್ರಗಳಲ್ಲಿ 900ರಷ್ಟು ಅಂಚೆ ಮತಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ’ ಎಂದು ತೇಜಸ್ವಿ ಹೇಳಿದ್ದಾರೆ.  ಚುನಾವಣಾ ಕರ್ತವ್ಯದಲ್ಲಿದ್ದ ಕೆಲವು ಅಧಿಕಾರಿಗಳು ಬಿಜೆಪಿಯ ಘಟಕದಂತೆ ಕೆಲಸ ಮಾಡಿದ್ದಾರೆ. ನಮ್ಮ ಕಳವಳಗಳಿಗೆ ಚುನಾವಣಾ ಆಯೋಗದಿಂದ ಸರಿಯಾದ ಸ್ಪಂದನೆ ಸಿಗದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಯನ್ನು ಎನ್‌ಡಿಎಯಲ್ಲಿ ಉಳಿಸಿಕೊಳ್ಳಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವುದು ಬಿಜೆಪಿಗೆ ಬಿಟ್ಟ ವಿಚಾರ ಎಂದು ನಿತೀಶ್‌ ಕುಮಾರ್ ಹೇಳಿದ್ದಾರೆ. ಎನ್‌ಡಿಎ ಕೂಟವು ಸರಳ ಬಹುಮತ ಪಡೆದಿದ್ದರಿಂದಾಗಿ ನಿತೀಶ್‌ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಖಚಿತವಾಗಿದೆ. ಎನ್‌ಡಿಎಯ ನಾಲ್ಕು ಮಿತ್ರ ಪಕ್ಷಗಳ ಅನೌಪಚಾರಿಕ ಸಭೆಯಲ್ಲಿ ಪ್ರಮಾಣವಚನ ಸ್ವೀಕಾರದ ದಿನಾಂಕ ನಿರ್ಧರಿಸಲಾಗುವುದು ಎಂದು ನಿತೀಶ್‌ ಹೇಳಿದ್ದಾರೆ.

* ಅಮೆರಿಕ ಚುನಾವಣೆಗಿಂತಲೂ ಬಿಹಾರ ಚುನಾವಣೆ ಹೆಚ್ಚು ಜಿದ್ದಾಜಿದ್ದಿಯಿಂದ ಕೂಡಿತ್ತು. ಬಿಹಾರದಲ್ಲಿ ಬಿಜೆಪಿ ಯಾವ ಕುತಂತ್ರ ಹೂಡಿತು ಗೊತ್ತಿಲ್ಲ, ಅದುವೇ ಬಿಜೆಪಿಯ ವೈಶಿಷ್ಟ್ಯ

– ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

* ಅಪರಾಧ, ಭ್ರಷ್ಟಾಚಾರ, ಕೋಮುವಾದದ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಈ ನಿಲುವು ಮುಂದೆಯೂ ಬದಲಾಗುವುದಿಲ್ಲ. ನನ್ನ ಆಳ್ವಿಕೆಯಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ

– ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು