ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರ್‌ಭೂಮ್‌ ಪ್ರಕರಣ: ಸಜೀವ ದಹನಕ್ಕೂ ಮುನ್ನ ತೀವ್ರ ಥಳಿತ

ಹಲ್ಲೆ ವಿಚಾರ ಶವಪರೀಕ್ಷೆಯಲ್ಲಿ ಪತ್ತೆ: ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ
Last Updated 24 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಕೋಲ್ಕತ್ತ/ರಾಮ್‌ಪುರಹಾಟ್‌: ‘ರಾಮ್‌ಪುರಹಾಟ್‌ನ ಬೋಗ್‌ತುಇ ಗ್ರಾಮದಲ್ಲಿ ಎಂಟು ಜನರನ್ನು ಸಜೀವವಾಗಿ ದಹಿಸುವ ಮುನ್ನ, ಅವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿತ್ತು ಎಂದು ಶವಪರೀಕ್ಷೆಯಲ್ಲಿ ಪತ್ತೆಯಾಗಿದೆ’ ಎಂದು ರಾಮ್‌ಪುರಹಾಟ್‌ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ರಾಮ್‌ಪುರಹಾಟ್‌ನ ಪಂಚಾಯಿತಿಯ ಟಿಎಂಸಿ ಸದಸ್ಯನ ಹತ್ಯೆಯ ನಂತರ ಬೋಗ್‌ತುಇ ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಕೃತ್ಯದಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು ಸೇರಿ ಎಂಟು ಜನರನ್ನು ಸಜೀವವಾಗಿ ಸುಡಲಾಗಿತ್ತು. ಮೃತರ ಶವಪರೀಕ್ಷೆಗಳನ್ನು ಬುಧವಾರ ನಡೆಸಲಾಗಿತ್ತು. ಶವಪರೀಕ್ಷೆಯ ವರದಿಗಳು ಇನ್ನೂ ಲಭ್ಯವಾಗಿಲ್ಲ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕಲ್ಕತ್ತ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಕೃತ್ಯ ನಡೆದ ಸ್ಥಳದಲ್ಲಿನ ಮಾದರಿಗಳನ್ನು ತಕ್ಷಣವೇ ಸಂಗ್ರಹಿಸಿ ಎಂದು ದೆಹಲಿಯ ಕೇಂದ್ರೀಯ ವಿಧಿ–ವಿಜ್ಞಾನ ಪ್ರಯೋಗಾಲಯಕ್ಕೆ ಬುಧವಾರ ಸೂಚನೆ ನೀಡಿತ್ತು. ಜತೆಗೆ ಘಟನೆಗೆ ಸಂಬಂಧಿಸಿದಂತೆ ಗುರುವಾರ ಮಧ್ಯಾಹ್ನ 2ರ ಒಳಗೆ ವರದಿ ಸಲ್ಲಿಸಿ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿತ್ತು.

ಕೃತ್ಯ ನಡೆದ ಸ್ಥಳದಲ್ಲಿ ತಕ್ಷಣವೇ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ ಮತ್ತು ಸಾಕ್ಷಿಗಳಿಗೆ ಭದ್ರತೆ ಒದಗಿಸಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್‌ ಸೂಚನೆ ನೀಡಿತ್ತು. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರುಕೃತ್ಯ ನಡೆದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದರು. ಈ ವೇಳೆ ಹೆಲಿಪ್ಯಾಡ್‌ ನಿರ್ಮಿಸಲಾಗಿದ್ದ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು ಒದಗಿಸಲಾಗಿತ್ತು.

‘ಪ್ರಕರಣದ ತನಿಖೆಗೆ ರಚಿಸಿರುವ ಎಸ್‌ಐಟಿಯ ಅಧಿಕಾರಿಗಳು ಗುರುವಾರ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಜತೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಬೋಗ್‌ತುಇ ಗ್ರಾಮಕ್ಕೆ ಭೇಟಿ ನೀಡಿ, ಜನರಲ್ಲಿದ್ದ ಆತಂಕವನ್ನು ಹೋಗಲಾಡಿಸಲು ಯತ್ನಿಸಿದ್ದಾರೆ. ಕೃತ್ಯದ ನಂತರ ಗ್ರಾಮವನ್ನು ತೊರೆದಿದ್ದ ಹಲವು ಕುಟುಂಬಗಳು, ಗುರುವಾರ ಪೊಲೀಸರ ಭೇಟಿಯ ನಂತರ ಬೋಗ್‌ತುಇಗೆ ವಾಪಸ್ಸಾಗಿವೆ’ ಎಂದು ಮೂಲಗಳು ಹೇಳಿವೆ.

ರಾಜ್ಯ ಸರ್ಕಾರಕ್ಕೆ ನೋಟಿಸ್‌: ಈ ಕೃತ್ಯಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಉತ್ತರ ನೀಡಿ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ಗುರುವಾರ ನೋಟಿಸ್ ನೀಡಿದೆ.

‘₹ 5 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ’
‘ಈ ಕೃತ್ಯದಲ್ಲಿ ಮೃತಪಟ್ಟವರ ಕುಟುಂಬದವರಿಗೆ ₹5 ಲಕ್ಷ ಪರಿಹಾರ ನೀಡುತ್ತೇವೆ. ಮನೆಗಳನ್ನು ಮರುನಿರ್ಮಿಸಲು ₹2 ಲಕ್ಷ ನೆರವು ನೀಡುತ್ತೇವೆ. ಜತೆಗೆ 10 ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ’ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಗುರುವಾರ ಬಿಗಿಭದ್ರತೆಯೊಂದಿಗೆ ಬೋಗ್‌ತುಇ ಗ್ರಾಮಕ್ಕೆ ಭೇಟಿ ನೀಡಿದ ಅವರು, ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ‘ಈ ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಕೃತ್ಯದಲ್ಲಿ ಗಾಯಗೊಂಡವರಿಗೆ ತಲಾ ₹50,000 ಪರಿಹಾರ ನೀಡುತ್ತೇವೆ’ ಎಂದು ಅವರು ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡು ರಾಮ್‌ಪುರಹಾಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನೂ ಮಮತಾ ಭೇಟಿ ಮಾಡಿದ್ದಾರೆ. ಸಾಂತ್ವನ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್ ಚೌಧರಿ ನೇತೃತ್ವದ ನಿಯೋಗವು ಗುರುವಾರ ಬೋಗ್‌ತುಇ ಗ್ರಾಮಕ್ಕೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿತ್ತು. ನಿಯೋಗವು ಬೋಗ್‌ತುಇ ಗ್ರಾಮದಿಂದ ಇನ್ನೂ 50 ಕಿ.ಮೀ. ದೂರದಲ್ಲಿ ಇರುವಾಗಲೇ, ಅವರನ್ನು ಪೊಲೀಸರು ತಡೆದಿದ್ದಾರೆ. ಕಾಂಗ್ರೆಸ್‌ ಇದನ್ನು ಖಂಡಿಸಿದೆ. ಆದರೆ ಪೊಲೀಸರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

‘ಗುರುವಾರ ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮವಿತ್ತು. ಹೀಗಾಗಿ ಬೋಗ್‌ತುಇ ಗ್ರಾಮದಲ್ಲಿ ಭಾರಿ ಭದ್ರತೆ ಒದಗಿಸಲಾಗಿತ್ತು. ಅದೇ ಸಮಯದಲ್ಲಿ ಅಧಿರ್ ರಂಜನ್ ಚೌಧರಿ ಅವರು ಸಹ ಭೇಟಿಗೆ ಮುಂದಾಗಿದ್ದರು. ಇದರಿಂದ ಭದ್ರತೆಗೆ ಸಮಸ್ಯೆಯಾಗುತ್ತದೆ ಎಂಬ ಒಂದೇ ಕಾರಣದಿಂದ ಅವರ ಭೇಟಿಗೆ ಅವಕಾಶ ನೀಡಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಭೇಟಿ ನೀಡಿ ವಾಪಸಾದ ನಂತರ, ಬಿಜೆಪಿ ನಾಯಕರ ನಿಯೋಗವು ಬೋಗ್‌ತುಇ ಗ್ರಾಮಕ್ಕೆ ಭೇಟಿ ನೀಡಿತ್ತು. ಬಿಜೆಪಿ ನಾಯಕರು, ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ನಂತರ ಅಧಿರ್ ನೇತೃತ್ವದ ನಿಯೋಗದ ಭೇಟಿಗೆ ಅವಕಾಶ ನೀಡಲಾಗಿದೆ.

ಟಿಎಂಸಿ ಬ್ಲಾಕ್‌ ಅಧ್ಯಕ್ಷ ಬಂಧನ
ಈ ಕೃತ್ಯಕ್ಕೆ ಸಂಬಂಧಿಸಿದಂತೆ ರಾಮ್‌ಪುರಹಾಟ್‌ ಬ್ಲಾಕ್‌ ಟಿಎಂಸಿ ಘಟಕದ ಅಧ್ಯಕ್ಷ ಅನಾರುಲ್ ಹುಸೈನ್ ಅವರನ್ನು ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಬೋಗ್‌ತುಇ ಗ್ರಾಮಕ್ಕೆ ಭೇಟಿ ನೀಡಿದ ನಂತರ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.

ಮಮತಾ ಅವರು ಇಲ್ಲಿಗೆ ಭೇಟಿ ನೀಡಿದ್ದಾಗ ಸಂತ್ರಸ್ತ ಕುಟುಂಬದ ಸದಸ್ಯರು, ಈ ಕೃತ್ಯಕ್ಕೆ ಅನಾರುಲ್ ಹುಸೈನ್ ಕಾರಣ ಎಂದು ದೂರಿದ್ದರು. ‘ಅನಾರುಲ್ ಇಲ್ಲಿ ದಂಧೆಗಳನ್ನು ನಡೆಸುತ್ತಿದ್ದ. ಪೊಲೀಸರು ಸಹ ಅವನೊಂದಿಗೆ ಇದ್ದರು. ಇಲ್ಲಿ ವೈಮನಸ್ಸು ಉಂಟಾಗಿ ಇತರರನ್ನು ಆತ ಕೊಲ್ಲಿಸಿದ್ದಾನೆ’ ಎಂದು ಸಂತ್ರಸ್ತ ಕುಟುಂಬಗಳ ಸದಸ್ಯರು, ಮಮತಾ ಬ್ಯಾನರ್ಜಿ ಅವರ ಬಳಿ ದೂರಿದ್ದರು. ಸಂಬಂಧಪಟ್ಟವರನ್ನು ಬಂಧಿಸಿ ಮತ್ತುಅನಾರುಲ್‌ ಜತೆಗೆ ಕೈಜೋಡಿಸಿದ್ದಾರೆ ಎನ್ನಲಾದ ಪೊಲೀಸರ ವಿರುದ್ಧವೂ ಕ್ರಮ ತೆಗೆದುಕೊಳ್ಳಿ ಎಂದುಮಮತಾ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು’ ಎಂದು ಮೂಲಗಳು ಹೇಳಿವೆ.

ನಂತರದ ಕೆಲವೇ ಗಂಟೆಗಳಲ್ಲಿ ಅನಾರುಲ್‌ನನ್ನು ಬಂಧಿಸಲಾಗಿದೆ. ಅವರನ್ನು ಶೀಘ್ರವೇ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಜತೆಗೆ ರಾಮ್‌ಪುರಹಾಟ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮತ್ತು ರಾಮ್‌ಪುರಹಾಟ್ ಉಪ–ವಿಭಾಗೀಯ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ನಿಲ್ಲದ ರಾಜಕೀಯ ಜಟಾಪಟಿ
ಬೋಗ್‌ತುಇ ಗ್ರಾಮದಲ್ಲಿ ಎಂಟು ಜನರ ಸಜೀವ ದಹನದ ನಂತರ ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷಗಳ ನಡುವೆ ಆರಂಭವಾಗಿದ್ದ ಜಟಾಪಟಿಯು ಗುರುವಾರವೂ ಮುಂದುವರಿದಿದೆ. ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಬೇಕು ಮತ್ತು ಸರ್ಕಾರವನ್ನು ವಜಾ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಟಿಎಂಸಿ ಒತ್ತಾಯಿಸಿದೆ.

‘ಪಶ್ಚಿಮ ಬಂಗಾಳದಲ್ಲಿ ಮಾನವೀಯತೆ ಸತ್ತುಹೋಗಿದೆ. ಅಲ್ಲಿಗೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ ಅವರು, ಮಮತೆಯನ್ನು ತೋರಲಿಲ್ಲ. ಬದಲಿಗೆ ಕ್ರೌರ್ಯವನ್ನು ತೋರಿದ್ದಾರೆ. ಅವರ ಸರ್ಕಾರವನ್ನು ವಜಾ ಮಾಡಬೇಕು. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆಗ್ರಹಿಸಿದ್ದಾರೆ.

ಟಿಎಂಸಿ ಸಂಸದರ ನಿಯೋಗವುಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿ ಮಾಡಿದೆ. ‘ರಾಜ್ಯಪಾಲ ಜಗದೀಪ್ ಧನಕರ್ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ವಜಾ ಮಾಡಿ’ ಎಂದು ಒತ್ತಾಯಿಸಿದ್ದಾರೆ.

ಹತ್ಯೆಯ ಸಂಬಂಧ ಲೋಕಸಭೆಯಲ್ಲೂ ಬಿಜೆಪಿ ಮತ್ತು ಟಿಎಂಸಿ ಸಂಸದರು ಜಟಾಪಟಿ ನಡೆಸಿದ್ದಾರೆ.

*
ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯವು ಭಯದ ನಾಡಾಗಿ ಬದಲಾಗಿದೆ. ಇದಕ್ಕೆಲ್ಲಾ ಟಿಎಂಸಿ ಆಡಳಿತವೇ ಕಾರಣ
-ಸೌಮಿತ್ರಾ ಖಾನ್‌, ಬಿಜೆಪಿ ಸಂಸದ

*
ರಾಜ್ಯಪಾಲ ಜಗದೀಪ್ ಧನಕರ್ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಅಧೀನದಲ್ಲಿ, ಸಂಸದೀಯ ವ್ಯವಸ್ಥೆಗೆ ಧಕ್ಕೆಯಾಗಿದೆ
-ಸುದೀಪ್ ಬಂದೋಪಾಧ್ಯಾಯ, ಟಿಎಂಸಿ ಸಂಸದ

*
ತನಿಖೆಯಲ್ಲಿ ರಾಜ್ಯ ಸರ್ಕಾರಕ್ಕೆ ಅಗತ್ಯ ನೆರವು ನೀಡುತ್ತೇವೆ ಎಂದು ಪ್ರಧಾನಿ ಹೇಳಿದ್ದು ಸ್ವಾಗತಾರ್ಹ. ಆದರೆ ಬೇರೆ ರಾಜ್ಯಗಳಲ್ಲಿ ಇಂತಹ ಘಟನೆ ನಡೆದಾಗ ಅವರು ಮೌನವಾಗಿದ್ದದ್ದೇ ಅಚ್ಚರಿ
-ಕುನಾಲ್ ಘೋಷ್, ಟಿಎಂಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT