ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ಕಾಯಿನ್‌ ಪ್ರಕರಣ| ಶ್ರೀಕಿ ಪ್ರಾಣಕ್ಕೆ ಅಪಾಯವಿದೆ: ಸಿದ್ದರಾಮಯ್ಯ

Last Updated 15 ನವೆಂಬರ್ 2021, 13:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್‌ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದ ಹಲವು ಅಂಶಗಳು ಶ್ರೀಕೃಷ್ಣ (ಶ್ರೀಕಿ) ನೆನಪಿನಲ್ಲಿ ಉಳಿದಿವೆ. ಹಗರಣಕ್ಕೆ ಲಿಖಿತ ದಾಖಲೆಗಳಿಲ್ಲ. ಹೀಗಾಗಿ ಶ್ರೀಕಿ ಪ್ರಾಣಕ್ಕೆ ಅಪಾಯವಿದ್ದು, ಆತನಿಗೆ ಭದ್ರತೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಸೋಮವಾರ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಶ್ರೀಕಿ ಭದ್ರತೆಗಾಗಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

‘ಬಿಟ್ ಕಾಯಿನ್ ಹಗರಣದ ಸೂತ್ರಧಾರ ಎನ್ನಲಾದ ಶ್ರೀಕೃಷ್ಣ/ ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು‌ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ. ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಶಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ,’ ಎಂದು ಹೇಳಿದ್ದಾರೆ.

‘ಬಿಟ್ ಕಾಯಿನ್ ಹಗರಣ ಸ್ಫೋಟಗೊಂಡ ನಂತರ ಸಣ್ಣ ಆರೋಪದ ಮೇಲೆ ನಾಟಕೀಯವಾಗಿ ಶ್ರೀಕಿಯನ್ನು ಬಂಧಿಸಿ, ಅಷ್ಟೇ ನಾಟಕೀಯವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಪೊಲೀಸರ ನಡವಳಿಕೆಗಳ ಬಗ್ಗೆ ಸಂಶಯಪಡುವಂತೆ ಮಾಡಿದೆ,‘ ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

‘ಕಳೆದ ವರ್ಷ ರಾಜ್ಯ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಶ್ರೀಕಿಗೆ ಮಾದಕ ವಸ್ತು ಚಟ ಇದ್ದುದನ್ನು ಹೇಳಲಾಗಿದೆ. ತಮ್ಮ ಮಗನಿಗೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಸ್ವತಃ ಶ್ರೀಕಿ ತಂದೆ ಆರೋಪಿಸಿದ್ದರು ಎನ್ನುವುದು ಗಮನಾರ್ಹ. ಶ್ರೀಕಿ ಈಗಲೂ ಡ್ರಗ್ ವ್ಯಸನಿಯೇ? ವ್ಯಸನಿಯಾಗಿದ್ದರೆ ಪೊಲೀಸರು ಈ ಬಾರಿ ಬಂಧಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆಯೇ? ಡ್ರಗ್ಸ್ ವ್ಯಸನಿ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗಿದೆಯೇ? ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯ ಗೃಹ ಸಚಿವರು ಮಾಹಿತಿ‌ ನೀಡಬೇಕು,‘ ಎಂದು ಆಗ್ರಹಿಸಿದ್ದಾರೆ.

‘ಬಿಟ್ ಕಾಯಿನ್ ಹಗರಣ ತಂತ್ರಜ್ಞಾನ ಅವಲಂಬಿಸಿರುವ 'ಬಿಳಿ ಕಾಲರ್ ಅಪರಾಧ'. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ. ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಯ ಪ್ರಾಣಕ್ಕೆ ಅಪಾಯದ ಸಾಧ್ಯತೆ ಇದೆ,’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT