ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿಸುತಲಿ ಅಳಿಸುವುದು ಕುಮಾರಸ್ವಾಮಿ ಧರ್ಮ: ಬಿಜೆಪಿ ವ್ಯಂಗ್ಯ

Last Updated 1 ಆಗಸ್ಟ್ 2022, 8:05 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿ ದೇವಾಲಯದ ಬಳಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ನೆನೆದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರಿಟ್ಟ ಪ್ರಸಂಗವನ್ನು ಬಿಜೆಪಿ ಗೇಲಿ ಮಾಡಿದೆ. ಅಳಿಸುತಲಿ ಅಳಿಸುವುದು ಕುಮಾರಸ್ವಾಮಿ ಧರ್ಮ! ಎಂದು ಕುಹಕವಾಡಿದೆ.

ಭಾನುವಾರ ನಡೆದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ದೇವೇಗೌಡರು ನೇರ ಪ್ರಸಾರದಲ್ಲಿ ವೀಕ್ಷಿಸುತ್ತಿದ್ದರು. ಆ ದೃಶ್ಯವನ್ನು ಪರದೆಯಲ್ಲಿ ತೋರಿಸಲಾಗುತ್ತಿತ್ತು. ‘ಅನಾರೋಗ್ಯದ ಕಾರಣ ದೇವೇಗೌಡರು ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಯಾರದೋ ಕೆಟ್ಟ ಕಣ್ಣು ಅವರ ಮೇಲೆ ಬಿದ್ದಿದೆ’ ಎಂದು ಕುಮಾರಸ್ವಾಮಿ ಕಣ್ಣೀರಿಟ್ಟರು. ಈ ವೇಳೆ ಎಚ್‌.ಡಿ.ರೇವಣ್ಣ ಸಹ ಭಾವುಕರಾದರು.

ಇದೇ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಸರಣಿ ಟ್ವೀಟ್‌ ಮಾಡಿ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಕೆಣಕಿದೆ. ‘ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶುಭಾಶಯಗಳು. ನಿಮ್ಮ ಜನತಾ ಜಲಧಾರೆ ಕಾರ್ಯಕ್ರಮವನ್ನು ಮೀರಿಸುವ ರೀತಿ ಇನ್ನೊಂದು ಯೋಜನೆ ರೂಪಿಸಿದ್ದೀರಿ. ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ! ಅಳು ಸಹಜ ಧರ್ಮ, ಅಳಿಸುವುದು ಪರಧರ್ಮ, ಅಳಿಸುತಲಿ ಅಳಿಸುವುದು ಅತಿಶಯದ ಕುಮಾರಸ್ವಾಮಿ ಧರ್ಮ! ಈ ಬಾರಿ ಪೂರ್ಣ ಬಹುಮತ ನೀಡದಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಕಣ್ಣೀರು ಸುರಿಸುತ್ತಿರುವ ಕುಮಾರಸ್ವಾಮಿ ಅವರು ಸಿದ್ದರಾಮೋತ್ಸವಕ್ಕೆ ಪೈಪೋಟಿ ನೀಡುತ್ತಿದ್ದಾರೆಯೇ?’ ಎಂದು ಅದು ಪ್ರಶ್ನಿಸಿದೆ.

‘ಒಂದೆಡೆ ಜನತಾ ಜಲಧಾರೆ, ಮತ್ತೊಂದೆಡೆ ಕಣ್ಣೀರಧಾರೆ, ಒಟ್ಟಿನಲ್ಲಿ ನೀರೋ, ನೀರು. ಮುಂದಿನ ಚುನಾವಣೆಯ ನಂತರ ಜೆಡಿಎಸ್‌ ಪಕ್ಷ ಮುಳುಗಲಿದೆ ಎಂಬುದರ ಸೂಚನೆಯಿದು. ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು, ಮಿಕ್ಕವರು ಮುಳುಗುವುದು ಪಕ್ಕಾ’ ಎಂದು ಬಿಜೆಪಿ ಭವಿಷ್ಯ ನುಡಿದಿದೆ.

‘ಮುಂದಿನ ಚುನಾವಣೆಯಲ್ಲಿ ಕಣ್ಣೀರಿನ ಮೂಲಕವಾದರೂ ಇರುವ 30 ಉಳಿಸಿಕೊಳ್ಳಲು ಜೆಡಿಎಸ್‌ ಹೆಣಗಾಡುತ್ತಿದೆ. ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು. ಆದರೆ ಚುನಾವಣೆ ಹತ್ತಿರದಲ್ಲಿರುವಾಗ ಜೆಡಿಎಸ್‌ ನಾಯಕರ ಕಣ್ಣೀರಿನ ಮಳೆಯ ಲೆಕ್ಕ ಎಂದಿಗೂ ತಪ್ಪದು. ಇಲ್ಲದ ಕಣ್ಣೀರು ಒತ್ತರಿಸಿ ಬರುವುದು ಇಲ್ಲಿ ಸಾಮಾನ್ಯ‘ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT