ಶುಕ್ರವಾರ, ಡಿಸೆಂಬರ್ 9, 2022
21 °C

ಪ್ರಣಾಳಿಕೆಯಲ್ಲಿ ತಪ್ಪಾದ ಭೂಪಟ: ಬೇಷರತ್ ಕ್ಷಮೆ ಯಾಚಿಸಿದ ಶಶಿ ತರೂರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಂಸದ ಶಶಿ ತರೂರ್, ತಮ್ಮ ಪ್ರಣಾಳಿಕೆಯಲ್ಲಿ ಭಾರತದ ತಪ್ಪಾದ ಭೂಪಟವನ್ನು ಹಂಚಿಕೊಳ್ಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಇಂದು ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ತರೂರ್, ತಮ್ಮ ಪ್ರಣಾಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಸೇರಿದಂತೆ ಕೆಲವು ಭಾಗಗಳು ಇಲ್ಲದೇ ಇರುವ ಭಾರತದ ತಪ್ಪು ಭೂಪಟವನ್ನು ಹಂಚಿಕೊಂಡಿದ್ದರು.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್‌ ಮಾಡಿ, ತರೂರ್ ತಮ್ಮ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿದ್ದಾರೆ ಎಂದು ಟೀಕಿಸಿದ್ದರು.

ತರೂರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ‘ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯಲ್ಲಿ ತೊಡಗಿರುವಾಗ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವವರು ಭಾರತವನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಹುಶಃ ಗಾಂಧಿಗಳ ಆಪ್ತರಾಗಿರಲು ಇದು ಸಹಾಯ ಮಾಡುತ್ತದೆ ಎಂದು ಅವರು ಭಾವಿಸಿರಬಹುದು’ಎಂದು ಟೀಕಿಸಿದ್ದರು.

ತೀವ್ರ ಟೀಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತರೂರ್, ಬೇಷರತ್ ಕ್ಷಮೆಯಾಚಿಸಿದ್ದಾರೆ. ಬಳಿಕ, ಟ್ವೀಟ್‌ನಲ್ಲಿ ಸರಿಯಾದ ನಕ್ಷೆ ಹಂಚಿಕೊಂಡಿದ್ದಾರೆ.

ನನ್ನ ಪ್ರಣಾಳಿಕೆಯಲ್ಲಾದ ಪ್ರಮಾದದ ಬಗ್ಗೆ ಟ್ರೋಲ್‌ಗಳ ಬಿರುಗಾಳಿಯೇ ಎದ್ದಿದೆ. ಆದರೆ, ಯಾರೂ ಸಹ ಉದ್ದೇಶಪೂರ್ವಕವಾಗಿ ಇಂತಹ ತಪ್ಪು ಮಾಡುವುದಿಲ್ಲ. ಸ್ವಯಂಸೇವಕರ ಸಣ್ಣ ತಂಡವೊಂದು ಈ ತಪ್ಪು ಮಾಡಿದೆ. ನನ್ನ ಗಮನಕ್ಕೆ ಬಂದ ಕೂಡಲೇ ಸರಿಪಡಿಸಿದ್ದೇನೆ. ಈ ಪ್ರಮಾದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಸರಿಪಡಿಸಲಾದ ಪ್ರಣಾಳಿಕೆ ಇಲ್ಲಿದೆ ನೋಡಿ ಎಂದು ಪ್ರಣಾಳಿಕೆ ಲಿಂಕ್ ಹಂಚಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು