ಬುಧವಾರ, ಜೂನ್ 29, 2022
26 °C

ಮಹಾರಾಷ್ಟ್ರ: ಸಂಪುಟದಿಂದ ಮಲಿಕ್‌ ಕೈಬಿಡಲು ಬಿಜೆಪಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ (ಎಂವಿಎ) ಸರ್ಕಾರದಲ್ಲಿ ಸಚಿವರಾಗಿ ಮುಂದುವರಿದಿರುವ ಎನ್‌ಸಿಪಿ ನಾಯಕ ನವಾಬ್‌ ಮಲಿಕ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ಶನಿವಾರ ಮತ್ತೆ ಆಗ್ರಹಿಸಿದೆ. 

ಭಯೋತ್ಪಾದಕ ದಾವೂದ್ ಇಬ್ರಾಹಿಂ ಜತೆ ಸಂಪರ್ಕ ಹೊಂದಿರುವವರಿಂದ ಆಸ್ತಿ ವ್ಯವಹಾರ ಸೇರಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಮಲಿಕ್‌ ಅವರನ್ನು ಫೆಬ್ರುವರಿ 23ರಂದು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.    

ಮಲಿಕ್ ಅವರು ಅಲ್ಪಸಂಖ್ಯಾತರ ಅಭಿವೃದ್ಧಿ, ವಕ್ಫ್ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದಾರೆ. ಅಲ್ಲದೆ ಅವರು ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದಾರೆ. ಅವರ ಖಾತೆಗಳು ಮತ್ತು ಎರಡು ಜಿಲ್ಲೆಗಳ ಉಸ್ತುವಾರಿಯನ್ನು ಎನ್‌ಸಿಪಿಯ ಇತರ ಇಬ್ಬರು ಸಚಿವರಿಗೆ ಹಂಚಲಾಗುತ್ತದೆ. ಆದರೆ, ಮಲಿಕ್‌ ಅವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ. 

‘ಇದು ಸರಿಯಾದ ಕ್ರಮವಲ್ಲ. ಅವರು ಸಚಿವರಾಗಿ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ತಿಳಿಸಿದ್ದಾರೆ. 

ಸಂಪುಟಕ್ಕೆ ಮಲಿಕ್‌ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂಬ ಬಿಜೆಪಿಯ ಬೇಡಿಕೆಯನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಇತ್ತೀಚೆಗೆ ತಿರಸ್ಕರಿಸಿದ್ದರು. ಮಲಿಕ್‌ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಬಿಜೆಪಿಯು ಇತ್ತೀಚೆಗಷ್ಟೇ ಇಲ್ಲಿನ ಆಜಾದ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು