ಶುಕ್ರವಾರ, ಮಾರ್ಚ್ 24, 2023
22 °C

'ನಕಲಿ ಹಿಂದೂಗಳು' ಎಂಬ ಟೀಕೆ: ರಾಹುಲ್ ನೆಲದ ಸಂಪರ್ಕ ಕಳೆದುಕೊಂಡಿದ್ದಾರೆ- ಬಿಜೆಪಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇವರೆಲ್ಲ ನಕಲಿ ಹಿಂದೂಗಳು. ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಗಾಂಧಿಯವರು ಈ 'ನೆಲದ ಸಂಪರ್ಕ ಕಡಿದುಕೊಂಡಿದ್ದಾರೆ' ಎಂದಿದೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ 38ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ‘ಕಾಂಗ್ರೆಸ್‌ನ ಸಿದ್ಧಾಂತವು ಬಿಜೆಪಿ ಮತ್ತು ಆರ್‌ಎಸ್ಎಸ್‌ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾದುದು. ಈ ಎರಡು ಸಿದ್ಧಾಂತಗಳಲ್ಲಿ ಒಂದು ಮಾತ್ರ ದೇಶವನ್ನು ಆಳಬಲ್ಲದು’ ಎಂದಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, 'ರಾಹುಲ್ ಗಾಂಧಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಹುಲ್ ಅವರು ಇಂತಹ ಹೇಳಿಕೆಗಳನ್ನು ನೀಡಬಾರದು. ಅವರು ಸಂಪೂರ್ಣವಾಗಿ ಈ ನೆಲದ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ಅವರಿಗೆ ಯಾವುದೇ ಮಾಹಿತಿ ಇಲ್ಲದಿರುವುದೇ ಮುಖ್ಯ ಸಮಸ್ಯೆ' ಎಂದು ಹೇಳಿದರು.

ಬಿಜೆಪಿಯು ಮಹಿಳೆಯರಿಗೆ ಗೌರವ ನೀಡುವುದಿಲ್ಲ ಎನ್ನುವ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಯಾವುದೇ ಗೊಂದಲವಿದ್ದರೆ ಅಂಥವರು ಕಣ್ಬಿಟ್ಟು ನೋಡಲಿ. ಯಾರೂ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಗಂಭೀರ ವ್ಯಕ್ತಿಯಲ್ಲ. ರಾಹುಲ್ ಗಾಂಧಿಯ ಟ್ರ್ಯಾಕ್ ರೆಕಾರ್ಡ್ ನೋಡಿದರೆ, ಅವರು ಕೆಲವೊಮ್ಮೆ ಪೇಪರ್ ಓದಿದ ನಂತರ ಮಾತನಾಡುತ್ತಾರೆ, ಕೆಲವೊಮ್ಮೆ ಎರಡು ಮೂರು ಸಾಲುಗಳನ್ನು ಕಾಪಿ ಮಾಡಿದ ನಂತರ ಮಾತನಾಡುತ್ತಾರೆ. ಅವರಿಗೆ ಈ ನೆಲದ ಮೇಲೆ ಏನಾಗುತ್ತಿದೆ ಎಂಬುದೇ ತಿಳಿದಿಲ್ಲ' ಎಂದವರು ಹೇಳಿದರು.

ಇದನ್ನೂ ಓದಿ: 

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, 'ರಾಹುಲ್ ಗಾಂಧಿಯವರ ಹೇಳಿಕೆಯು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ. ತಮ್ಮ ಭಾಷಣದ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಲಕ್ಷ್ಮಿ, ದುರ್ಗಾ, ಸರಸ್ವತಿ ಎನ್ನುವುದು ಕೋಟ್ಯಂತರ ಜನರ ಭಾವನೆಗಳ ಕೇಂದ್ರವಾಗಿದೆ. ಯಾವುದೇ ಧರ್ಮವನ್ನು ಉಲ್ಲೇಖಿಸಿ ಅಂತಹ ಪದಗಳನ್ನು ಬಳಸುವುದು ಸರಿಯಲ್ಲ' ಎಂದಿದ್ದಾರೆ.

'ಈ ಮಾತುಗಳು ದೇವರ ಮೇಲೆ ಪರಿಣಾಮ ಬೀರುವುದಿಲ್ಲ. 'ದುರ್ಗಾ ಮಾ ಅಥವಾ ಲಕ್ಷ್ಮಿಯ ಶಕ್ತಿಗಳು ಕಡಿಮೆಯಾಗಿಲ್ಲ. ಆದರೆ, ಆಕೆಯ ಮಗನ ಅಜ್ಞಾನದಿಂದಾಗಿ ಯಾರದ್ದಾದರೂ ಶಕ್ತಿ ಕಡಿಮೆಯಾಗಿದ್ದರೆ ಅದು ಸೋನಿಯಾ ಮಾ ಅವರದ್ದು' ಎಂದು ಪಾತ್ರ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು