ಮಂಗಳವಾರ, ಜುಲೈ 27, 2021
21 °C
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು

ಬಿಜೆಪಿ ಮುಖ್ಯಮಂತ್ರಿಗಳ ಜೊತೆ ಜೆ.ಪಿ ನಡ್ಡಾ ವಿಡಿಯೊ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸೋಮವಾರ (ಜೂನ್‌ 21) ಹಮ್ಮಿಕೊಂಡಿರುವ ಲಸಿಕೆ ಮೇಳವನ್ನು ಯಶಸ್ವಿಗೊಳಿಸಬೇಕು. ಕೋವಿಡ್‌ನ್ನು ಸಮರ್ಪಕವಾಗಿ ನಿಭಾಯಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಲಹೆ ನೀಡಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಜೆ.ಪಿ ನಡ್ಡಾ ಅವರು ಭಾನುವಾರ ನಡೆಸಿದ ವಿಡಿಯೊ ಸಂವಾದದಲ್ಲಿ ತಮ್ಮ ನಿವಾಸ ‘ಕಾವೇರಿ’ಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿದರು. ಸುಮಾರು ಒಂದು ಗಂಟೆ ಸಂವಾದ ನಡೆಯಿತು.

‘ಯೋಗ ದಿನಾಚರಣೆ ಪ್ರಯುಕ್ತ ಲಸಿಕೆ ಮೇಳ ನಡೆಸಬೇಕು. ಅದನ್ನು ಯಶಸ್ವಿಗೊಳಿಸಬೇಕು. ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜೊತೆಗೆ ಕೊರೊನಾ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು’ ಎಂದು ನಡ್ಡಾ ಸಲಹೆ ನೀಡಿದ್ದಾರೆ.

ಪಕ್ಷ ಸಂಘಟನೆಗೂ ಒತ್ತು: ಕೋವಿಡ್ ಸಂಕಷ್ಟ ಸಮಯದಲ್ಲಿ ಕಾರ್ಯಕರ್ತರು ಜನರ ಜತೆ ಇರಬೇಕು. ಬೂತ್ ಮಟ್ಟಕ್ಕೆ ಕಾರ್ಯಕ್ರಮಗಳು ತಲುಪಬೇಕು. ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡಬೇಕು. ಪಕ್ಷ ಸಂಘಟನೆ ಚಟುವಟಿಕೆಯನ್ನೂ ಮರೆಯಬಾರದು’ ಎಂದೂ ನಡ್ಡಾ ಸಲಹೆ ನೀಡಿದ್ದಾರೆ.

‘ಮುಂದಿನ ಚುನಾವಣೆಗಳಲ್ಲಿ ಕೋವಿಡ್‌ ಪ್ರಮುಖ ಅಸ್ತ್ರವಾಗಲಿದೆ. ಅದರಲ್ಲಿ ಯಶಸ್ವಿಯಾದರೆ ಪಕ್ಷಕ್ಕೆ ಲಾಭ, ಸಂಘಟನೆಗೂ ಲಾಭ. ವಿಫಲವಾದರೆ ಪಕ್ಷದ ವಿರುದ್ಧ ವಿರೋಧ ಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಲಿದೆ. ಹೀಗಾಗಿ ಕೋವಿಡ್ ಯಶಸ್ವಿಯಾಗಿ ನಿರ್ವಹಿಸಿ, ಪಕ್ಷ ಸಂಘಟನೆ ಬಲಪಡಿಸಬೇಕು’ ಎಂದೂ ಸೂಚನೆ ನೀಡಿದ್ದಾರೆ.

‘ಕೋವಿಡ್ ನಿಯಮಗಳನ್ನು ಪಾಲಿಸಿ ಪ್ರತಿ ತಾಲ್ಲೂಕಿನಲ್ಲೂ ಯೋಗ ದಿನ ಆಚರಿಸಬೇಕು. ಕಲಾವಿದರು, ಪ್ರಮುಖ ವ್ಯಕ್ತಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಭಾಗವಹಿಸಲು ಆಹ್ವಾನ ನೀಡಬೇಕು. ಇದೇ 25ರಂದು ತುರ್ತುಪರಿಸ್ಥಿತಿಯ ನೆನಪಿಗಾಗಿ ಎಲ್ಲ ತಾಲ್ಲೂಕುಗಳಲ್ಲಿ ಕರಾಳ ದಿನಾಚರಣೆಗೆ ಪಕ್ಷ ನಿರ್ಧರಿಸಿದೆ. ಆ ದಿನ ವವಿಡಿಯೊ ಸಂವಾದ ಮೂಲಕ ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದವರನ್ನು ಗುರುತಿಸುವ ಕೆಲಸ ಮಾಡಬೇಕು’ ಎಂದೂ ಸಲಹೆ ನೀಡಿದರು.

‘ಇದೇ 23ರಂದು ಡಾ. ಶ್ಯಾಮ್​ಪ್ರಸಾದ್ ಮುಖರ್ಜಿ ಪುಣ್ಯತಿಥಿ ಮತ್ತು ಜುಲೈ 6ರಂದು ಅವರ ಜನ್ಮದಿನ ಇದೆ. ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಶ್ಯಾಮ್​ಪ್ರಸಾದ್ ಮುಖರ್ಜಿ ಅವರ ಚಿಂತನೆಗಳು, ಜೀವನ ಸ್ಫೂರ್ತಿ ಬಗ್ಗೆ ವಿಡಿಯೊ ಸಂವಾದ ಮೂಲಕ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಬೇಕು’ ಎಂದೂ ನಡ್ಡಾ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಚಾಲನೆ: ಸೋಮವಾರ ನಡೆಯಲಿರುವ ಲಸಿಕೆ ಮೇಳಕ್ಕೆ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಲಸಿಕೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೋಮವಾರ ಒಂದೇ ದಿನ 7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ಬಿಜೆಪಿಯು ಮೂಲಭೂತವಾಗಿ ಕನ್ನಡ ವಿರೋಧಿ: ಎಚ್‌.ಡಿ ಕುಮಾರಸ್ವಾಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು