ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬೆಂಬಲಿಗರಿಂದ ದೆಹಲಿ ಸಿಎಂ ಮನೆಯ ತಡೆದ್ವಾರ ಧ್ವಂಸ: ಎಎಪಿ ಆರೋಪ

Last Updated 30 ಮಾರ್ಚ್ 2022, 12:33 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರ ಫೈಲ್ಸ್ ಚಿತ್ರದ ಕುರಿತಾಗಿ ದೆಹಲಿ ಮುಖ್ಯಮಂತ್ರಿ ಅವರ ಹೇಳಿಕೆ ಖಂಡಿಸಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಬೆಂಬಲಿಗರು ಕೇಜ್ರಿವಾಲ್ ನಿವಾಸದ ಮುಂಭಾಗದ ತಡೆದ್ವಾರವನ್ನು ಒಡೆದು ಹಾಕಿದ್ದಾರೆ ಎಂದು ಎಎಪಿ ಟ್ವೀಟ್‌ನಲ್ಲಿ ಆರೋ‍ಪಿಸಿದೆ.

ಪಂಜಾಬ್‌ನಲ್ಲಿ ಎಎಪಿ ಗೆಲುವನ್ನು ಸಹಿಸಿಕೊಳ್ಳಲಾರದ ಬಿಜೆಪಿ, ದೆಹಲಿ ಪೊಲೀಸರ ಬೆಂಬಲದೊಂದಿಗೆ ದೆಹಲಿ ಮುಖ್ಯಮಂತ್ರಿ ಮನೆ ಮೇಲೆ ದಾಳಿ ನಡೆಸಿದೆ ಎಂದು ಎಎಪಿ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಮಾಜ ವಿರೋಧಿ ಶಕ್ತಿಗಳು ಸಿಎಂ ಮನೆ ಮೇಲೆ ದಾಳಿ ನಡೆಸಿದ್ದು, ಸಿಸಿಟಿವಿ ಮತ್ತು ಭದ್ರತಾ ಗೇಟ್ ಅನ್ನು ಒಡೆದು ಹಾಕಿವೆ. ‘ಬಿಜೆಪಿ ಬೆಂಬಲಿತ ಗೂಂಡಾಗಳು ಮುಖ್ಯಮಂತ್ರಿ ಮನೆ ಮೇಲೆ ದಾಳಿ ನಡೆಸಿವೆ. ದಾಳಿಕೋರರನ್ನು ತಡೆಯುವುದನ್ನು ಬಿಟ್ಟು ಬಿಜೆಪಿ ಬೆಂಬಲಿತ ಪೊಲೀಸರು ಅವರನ್ನು ಸಿಎಂ ಮನೆ ಮುಂದೆ ತಂದು ಬಿಟ್ಟಿದ್ದಾರೆ’ಎಂದು ಅವರು ಆರೋಪಿಸಿದ್ದಾರೆ.

ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಕೂಡ, 'ಬಿಜೆಪಿ ಬೆಂಬಲಿಗರ ದಾಳಿಯು ದೆಹಲಿ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲೇ ನಡೆದಿದೆ. ಈ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ತಡೆ ದ್ವಾರಗಳನ್ನು ಒಡೆದು ಹಾಕಲಾಗಿದೆ’ ಎಂದು ಆರೋಪಿಸಿದ್ದಾರೆ.

ಸಂಘಟನೆಯ ಕಾರ್ಯಕರ್ತರು ಮತ್ತು ಮುಖಂಡರು ಕೇಜ್ರಿವಾಲ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಆದರೆ, ವಿಧ್ವಂಸಕ ಕೃತ್ಯಗಳನ್ನು ನಡೆಸಿಲ್ಲ ಎಂದು ಬಿಜೆವೈಎಂ ರಾಷ್ಟ್ರೀಯ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಗ್ಗಾ ಹೇಳಿದ್ದಾರೆ.

‘ನಮ್ಮನ್ನು ಪೊಲೀಸರು ತಡೆದರು. ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಸುಮಾರು 20-25 ಮಂದಿ ಸದಸ್ಯರು ಮತ್ತು ಮುಖಂಡರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು’ಎಂದು ಬಗ್ಗಾ ಪಿಟಿಐಗೆ ತಿಳಿಸಿದ್ದಾರೆ.

'ದಿ ಕಾಶ್ಮೀರ ಫೈಲ್ಸ್' ಚಿತ್ರದ ಕುರಿತು ಬಿಜೆಪಿ ಮತ್ತು ಎಎಪಿ ಮಾತಿನ ಚಕಮಕಿಯಲ್ಲಿ ತೊಡಗಿದ್ದು, ಕೇಜ್ರಿವಾಲ್ ಇತ್ತೀಚೆಗೆ ದೆಹಲಿ ವಿಧಾನಸಭೆಯಲ್ಲಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು 8 ವರ್ಷಗಳ ಕಾಲ ಆಳಿದರೂ ಆರೋಪಿಸುವುದನ್ನು ನಿಲ್ಲಿಸಿಲ್ಲ. ರಾಜಕೀಯ ಲಾಭಕ್ಕಾಗಿ ಒಂದು ಸಿನಿಮಾದ ಸಹಾಯವನ್ನು ಪಡೆಯುತ್ತಿದ್ದಾರೆ’ಎಂದು ವಿಧಾನಸಭೆಯಲ್ಲಿ ಟೀಕಿಸಿದ್ದರು. ತೆರಿಗೆ ವಿನಾಯಿತಿ ಏಕೆ ಕೊಡಬೇಕು? ಯೂಟ್ಯೂಬ್‌ನಲ್ಲಿ ಹಾಕಿ ಎಲ್ಲರೂ ನೋಡುತ್ತಾರೆ ಎಂದು ಹೇಳಿದ್ದರು.

ಇದಾದ ಬಳಿಕ, ಕಾಶ್ಮೀರಿ ಪಂಡಿತರ ನೋವನ್ನು ಕೇಜ್ರಿವಾಲ್ 'ಅಪಹಾಸ್ಯ‌’ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಟೀಕೆ ನಡೆಸುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT