ದೇಶದಲ್ಲಿ 'ಕಂಪನಿ ಆಳ್ವಿಕೆ' ಹೇರಲು ಪ್ರಯತ್ನಿಸುತ್ತಿರುವ ಬಿಜೆಪಿ: ಅಖಿಲೇಶ್ ಯಾದವ್

ಲಖನೌ: ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಹಳೆಯ ಸಾಮ್ರಾಜ್ಯಶಾಹಿ ಬ್ರಿಟಿಷ್ ಆಡಳಿತದೊಂದಿಗೆ ಹೋಲಿಕೆ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ದೇಶದಲ್ಲಿ 'ಕಂಪನಿ ಆಳ್ವಿಕೆ' ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರೈತರ ಆದಾಯ ದ್ವಿಗುಣಗೊಳ್ಳುವ ಸಾಧ್ಯತೆಯಿಲ್ಲ. ಸತ್ಯಾಂಶವೆಂದರೆ ರೈತರು ಗಳಿಸುತ್ತಿದ್ದ ಆದಾಯ ಕೂಡಾ ಕೊನೆಗೊಂಡಿದೆ. ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಬ್ರಿಟಿಷರು ಭಾರತವನ್ನು ವಶಪಡಿಸಿಕೊಂಡ ರೀತಿಯಲ್ಲೇ ದೇಶದಲ್ಲಿ ಕಂಪನಿ ಆಳ್ವಿಕೆ ಹೇರಲು ಬಿಜೆಪಿ ಬಯಸುತ್ತಿದೆ ಎಂದು ಅಖಿಲೇಶ್ ಹೇಳಿದರು.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್, ಸಾವಿರಾರು ರೈತರು ಸಮಸ್ಯೆಗಳನ್ನು ಎತ್ತುತ್ತಿರುವಾಗ, ಸರ್ಕಾರವು ಅದನ್ನು ಬಗೆಹರಿಸಬೇಕು. ಆದರೆ ಬಿಜೆಪಿ ಸರ್ಕಾರವು ರೈತರ ಮೇಲೆ ತನ್ನ ಕಾನೂನುಗಳನ್ನು ಹೇರುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ತಮಿಳುನಾಡಿನಲ್ಲಿ ಎನ್ಡಿಎ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ: ಅಮಿತ್ ಶಾ
ಹೊಸ ಕೃಷಿ ಕಾಯ್ದೆಗಳು ಜಾರಿಗೆ ಬಂದರೆ ರೈತರು ಕಾರ್ಮಿಕರಾಗುತ್ತಾರೆ ಎಂಬ ಆತಂಕ ರೈತರಲ್ಲಿದೆ ಎಂದು ಅಖಿಲೇಶ್ ತಿಳಿಸಿದರು.
ಬಿಜೆಪಿಯ ಹಠಮಾರಿತನ ಮನೋಭಾವದಿಂದಾಗಿ ವಿವಿಧ ದೇಶಗಳ ಸಾಮಾಜಿಕ ಕಾರ್ಯಕರ್ತರು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಟೈಮ್ ನಿಯತಕಾಲಿಕೆಯು ತನ್ನ ಮುಖಪುಟವನ್ನು (ಕವರ್ ಪೇಜ್) ನಿರ್ಭೀತಿಯಿಂದ ಅಂದೋಲನದಲ್ಲಿ ಭಾಗವಹಿಸುತ್ತಿರುವ ಮಹಿಳಾ ರೈತರಿಗಾಗಿ ಮೀಸಲಿಟ್ಟಿದೆ ಎಂದು ಉಲ್ಲೇಖಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.