ಶನಿವಾರ, ಅಕ್ಟೋಬರ್ 1, 2022
20 °C
ಚುನಾವಣಾ ಸಮಿತಿಯಲ್ಲಿಯೂ ಬಿಎಸ್‌ವೈಗೆ ಸ್ಥಾನ

ಬಿಜೆಪಿಯ ಹೊಸ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಸ್ಥಾನ, ಗಡ್ಕರಿ ಹೊರಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಕೇಂದ್ರ ನಾಯಕತ್ವವು, ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿರುವ ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸೇರ್ಪಡೆ ಮಾಡಿದೆ.

ಬಿ.ಎಸ್. ಯಡಿಯೂರಪ್ಪ ಅವರು 2021ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ನಡೆಸಲು ಸಿದ್ಧತೆ ನಡೆಸಿದ್ದರು. ಇದಕ್ಕೂ ವರಿಷ್ಠರು ಒಪ್ಪಿಗೆ ನೀಡಿರಲಿಲ್ಲ. ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳ ಬೇಕು ಎಂಬ ಅಪೇಕ್ಷೆ ಅವರದ್ದು ಆಗಿತ್ತು. ಅದಕ್ಕೂ ವರಿಷ್ಠರು ಮಣೆ ಹಾಕಿರಲಿಲ್ಲ. ಈ ಎಲ್ಲ ಬೆಳವಣಿಗೆಗಳಿಂದ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು. 

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ನಡೆದಿದ್ದ ಕಾರ್ಯಕ್ರಮದ ಯಶಸ್ಸು ಬಿಜೆಪಿಯಲ್ಲಿ ಚರ್ಚೆ ಹುಟ್ಟು ಹಾಕಿತ್ತು. ಆ ವೇಳೆಯಲ್ಲಿಯೇ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದ್ದರು. ಪಕ್ಷ ಹಾಗೂ ಸರ್ಕಾರದ ವೈಫಲ್ಯದ ಬಗ್ಗೆ ಯಡಿಯೂರಪ್ಪ ಅವರು ಶಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮರಳಿ ಅಧಿಕಾರ ಹಿಡಿಯುವುದು ಕಷ್ಟ ಎಂದೂ ಪ್ರತಿಪಾದಿಸಿದ್ದರು.

ಈ ಬೆಳವಣಿಗೆಗಳ ಬೆನ್ನಲ್ಲೇ, ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಯಡಿಯೂರಪ್ಪ ಮುನಿಸಿನಿಂದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಮತ ಬ್ಯಾಂಕ್‌ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿಯೂ ಈಗಿನ ನೇಮಕದ ಹಿಂದಿದೆ ಎಂದೂ ವಿಶ್ಲೇಷಿಸಲಾಗಿದೆ.

ಕೇಂದ್ರ ಸಚಿವರಾ‌ಗಿದ್ದ ಅನಂತ ಕುಮಾರ್ ಅವರು ಈ ಹಿಂದೆ ಸಂಸದೀಯ ಮಂಡಳಿಯ ಸದಸ್ಯರಾಗಿ ದ್ದರು.  ಬಿ.ಎಲ್‌.ಸಂತೋಷ್ ಅವರು ನಾಲ್ಕು ವರ್ಷಗಳಿಂದ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯ ಸದಸ್ಯರಾಗಿದ್ದಾರೆ. 

ಜೆ.ಪಿ.ನಡ್ಡಾ ಅಧ್ಯಕ್ಷರಾದ ಬಳಿಕ ಸಂಸದೀಯ ಸಮಿತಿಯನ್ನು ಮೊದಲ ಬಾರಿಗೆ ಪುನರ್‌ ರಚಿಸಲಾಗಿದೆ. ಸಂಸದೀಯ ಮಂಡಳಿಯಿಂದ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಅವರನ್ನು ಕೈಬಿಡಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕಿಲ್ಲ. ಯಡಿಯೂರಪ್ಪ ಅವರ ಜತೆಗೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್‌, ಮುಖಂಡ ಕೆ. ಲಕ್ಷ್ಮಣ, ಇಕ್ಬಾಲ್‌ ಸಿಂಗ್‌ ಲಾಲ್‌ಪುರ, ಸುಧಾ ಯಾದವ್‌, ಸತ್ಯನಾರಾಯಣ ಜಟಿಯಾ ಮಂಡಳಿಗೆ ಸೇರ್ಪಡೆಯಾಗಿ ದ್ದಾರೆ. ಚುನಾವಣಾ ಸಮಿತಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಅವರನ್ನು ಸೇರ್ಪಡೆ ಮಾಡಲಾಗಿದೆ.

75 ವರ್ಷ ದಾಟಿರುವ ಯಡಿಯೂರಪ್ಪ,ಸತ್ಯನಾರಾಯಣ ಜಟಿಯಾ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು, 75 ವರ್ಷ ದಾಟಿದವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದರು. ಅದೇ ಕಾರಣಕ್ಕೆ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಅವರನ್ನು ಸಂಸದೀಯ ಮಂಡಳಿಯಿಂದ ಕೈ ಬಿಡಲಾಗಿತ್ತು. ಅವರಿಗೆ ‘ಮಾರ್ಗದರ್ಶಕ’ರ ಹೊಣೆ ವಹಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು