ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿವಾಹದ ವಯಸ್ಸು 21 ವರ್ಷಕ್ಕೆ ಹೆಚ್ಚಳ: ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ

Last Updated 16 ಡಿಸೆಂಬರ್ 2021, 22:28 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 18 ವರ್ಷದಿಂದ 21 ವರ್ಷಕ್ಕೆ ಏರಿಸುವುದಕ್ಕಾಗಿ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪುರುಷರ ಮದುವೆಯ ಕನಿಷ್ಠ ವಯಸ್ಸು ಈಗ 21 ವರ್ಷವೇ ಇದೆ.

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಒಪ್ಪಿಗೆ ನೀಡಿದೆ.

ಸಮತಾ ಪಾರ್ಟಿಯ ಮುಖ್ಯಸ್ಥೆಯಾಗಿದ್ದ ಜಯಾ ಜೇಟ್ಲಿ ಅವರ ನೇತೃತ್ವದಲ್ಲಿ ನೀತಿ ಆಯೋಗವು 2020ರ ಜೂನ್‌ನಲ್ಲಿ ಕಾರ್ಯಪಡೆಯೊಂದನ್ನು ರಚಿಸಿತ್ತು. ತಾಯಿಯಾಗುವ ವಯಸ್ಸು, ಹೆರಿಗೆ ಸಂದರ್ಭದಲ್ಲಿ ತಾಯಿಯಂದಿರ ಸಾವಿನ ಪ್ರಮಾಣ ತಗ್ಗಿಸುವುದು, ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕತೆ ಹೆಚ್ಚಳದಂತಹ ವಿಚಾರಗಳ ಬಗ್ಗೆ ಶಿಫಾರಸುಗಳನ್ನು ಸಲ್ಲಿಸುವುದು ಈ ಕಾರ್ಯಪಡೆಯ ಹೊಣೆಯಾಗಿತ್ತು.

‘ಕಾರ್ಯಪಡೆಯು ಯುವ ಜನರು ಮತ್ತು ಸಂಘಟನೆಗಳ ಜತೆಗೆ ಸಮಾಲೋಚನೆ ನಡೆಸಿತ್ತು. ದೇಶದ ಎಲ್ಲ ಪ್ರದೇಶಗಳ 16 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರಶ್ನಾವಳಿ ಕೊಟ್ಟು ಪ್ರತಿಕ್ರಿಯೆ ಪಡೆದುಕೊಳ್ಳಲಾಗಿತ್ತು. ಮದುವೆಯ ಕನಿಷ್ಠ ವಯಸ್ಸನ್ನು 22 ಅಥವಾ 23 ವರ್ಷಕ್ಕೆ ಹೆಚ್ಚಿಸಬೇಕು ಎಂದು ಹೆಚ್ಚಿನವರು ಹೇಳಿದ್ದರು. ಆದರೆ, ನಾವು ಮದುವೆಯ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಶಿಫಾರಸು ಮಾಡಿದ್ದೆವು’ ಎಂದು ಜಯಾ ಜೇಟ್ಲಿ ಹೇಳಿದ್ದಾರೆ.

ತಾಯಂದಿರು ಮತ್ತು ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು, ಹೆಣ್ಣು ಮಕ್ಕಳ ಆರೋಗ್ಯ ತಪಾಸಣೆಯನ್ನು ಶಾಲೆಯಲ್ಲಿ ಪ್ರತಿ ತಿಂಗಳು ನಡೆಸಲು ವ್ಯವಸ್ಥೆ ಮಾಡಬೇಕು ಎಂಬುದು ಈ ಶಿಫಾರಸುಗಳಲ್ಲಿ ಸೇರಿವೆ. ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನೂ ಸೇರಿಸಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ.

‘ಶೇ 50ರಿಂದ ಶೇ 60ರಷ್ಟು ಹೆಣ್ಣು ಮಕ್ಕಳಿಗೆ 21 ವರ್ಷಕ್ಕೆ ಮೊದಲೇ ಮದುವೆ ಆಗುತ್ತಿದೆ. ಕಾಯ್ದೆಗೆ ತಿದ್ದುಪಡಿ ಆದರೆ, ಇಂತಹ ಎಲ್ಲ ಮದುವೆಯು ಅಪರಾಧ ಎಂದು ಪರಿಗಣಿತವಾಗುತ್ತದೆ. ಕಾಯ್ದೆಯೊಂದರಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಮದುವೆ 21 ವರ್ಷಗಳಿಗಿಂತಲೂ ಬಹಳ ತಡವಾಗಿಯೇ ಆಗುತ್ತದೆ. ಕಾಯ್ದೆಯ ನಿರ್ಬಂಧ ಇಲ್ಲದೆಯೇ ಇದು ಸಾಧ್ಯವಾಗಿದೆ’ ಎಂದು ಆಕ್ಸ್‌ಫ್ಯಾಮ್‌ ಇಂಡಿಯಾದ ಲಿಂಗತ್ವ ನ್ಯಾಯ ಘಟಕದ ಪ್ರಧಾನ ತಜ್ಞೆ ಅಮಿತಾ ಪಿತ್ರೆ ಹೇಳಿದ್ದಾರೆ.

ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಹೆಚ್ಚಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದರು.

43 ವರ್ಷದ ಬಳಿಕ ಬದಲಾವಣೆ
ಮದುವೆಯ ಕನಿಷ್ಠ ವಯಸ್ಸು 43 ವರ್ಷದ ಬಳಿಕ ಬದಲಾವಣೆಯಾಗಿದೆ. ಬಾಲ್ಯವಿವಾಹ ನಿರ್ಬಂಧ ಕಾಯ್ದೆ 1929ಕ್ಕೆ 1978ರಲ್ಲಿ ತಿದ್ದುಪಡಿ ತಂದು ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 15ರಿಂದ 18ಕ್ಕೆ ಏರಿಸಲಾಗಿತ್ತು. ಬಾಲ್ಯವಿವಾಹ ನಿರ್ಬಂಧ ಕಾಯ್ದೆ 1929ರ ಬದಲಿಗೆ ಬಾಲ್ಯವಿವಾಹ ತಡೆ ಕಾಯ್ದೆಯನ್ನು 2006ರಲ್ಲಿ ತರಲಾಗಿತ್ತು.

ಮೊದಲಿಗೆ ಬಾಲ್ಯ ವಿವಾಹ ತಡೆ ಕಾಯ್ದೆ 2006ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ನಂತರ, ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ 1955ರಂತಹ ವೈಯಕ್ತಿಕ ಕಾನೂನುಗಳಿಗೂ ತಿದ್ದುಪಡಿ ತರಬೇಕಾಗುತ್ತದೆ. ಈ ಎಲ್ಲ ಕಾಯ್ದೆಗಳಲ್ಲಿ ಹೆಣ್ಣಿನ ಮದುವೆಯ ಕನಿಷ್ಠ ವಯಸ್ಸು 18 ಮತ್ತು ಗಂಡಿನ ಮದುವೆಯ ಕನಿಷ್ಠ ವಯಸ್ಸು 21 ಎಂದು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT