ಶುಕ್ರವಾರ, ಮಾರ್ಚ್ 31, 2023
29 °C

ವಿಧಾನಸಭಾ ಚುನಾವಣೆ ಮೇಲೆ ದೃಷ್ಟಿ: ಉತ್ತರ ಪ್ರದೇಶಕ್ಕೆ ಮತ್ತೆ 7 ಮಂತ್ರಿ ಸ್ಥಾನ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ವರ್ಷದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ಇನ್ನೂ 7 ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಈವರೆಗೆ ನರೇಂದ್ರ ಮೋದಿ ಸಂಪುಟದಲ್ಲಿ ಉತ್ತರ ಪ್ರದೇಶದ ಆರು ಮಂದಿ ಇದ್ದರು. ರಾಜನಾಥ್ ಸಿಂಗ್, ಮಹೇಂದ್ರ ನಾಥ್ ಪಾಂಡೆ, ಜನರಲ್ ವಿ.ಕೆ.ಸಿಂಗ್, ಕೃಷನ್ ಪಾಲ್, ಸಾಧ್ವಿ ನಿರಂಜನ್ ಜ್ಯೋತಿ ಹಾಗೂ ಸಂಜೀವ್ ಬಲ್ಯಾನ್ ಕೇಂದ್ರ ಸಂಪುಟದ ಹಾಲಿ ಸಚಿವರು. ಇದೀಗ ಮೋದಿ ಸಂಪುಟದಲ್ಲಿ ಉತ್ತರ ಪ್ರದೇಶದವರ ಸಂಖ್ಯೆ 13ಕ್ಕೆ ತಲುಪಿದೆ. ಗುಜರಾತ್ ಮೂಲದವರಾದರೂ ಮೋದಿಯವರು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರವೂ ಉತ್ತರ ಪ್ರದೇಶದ್ದೇ (ವಾರಾಣಸಿ).

ಓದಿ: 

ಸಂಪುಟ ಪುನರ್‌ರಚನೆಯೊಂದಿಗೆ ಉತ್ತರ ಪ್ರದೇಶದ ಅನುಪ್ರಿಯಾ ಪಟೇಲ್, ಪಂಕಜ್ ಚೌಧರಿ, ಸತ್ಯಪಾಲ್ ಸಿಂಗ್ ಬಘೆಲ್, ಭಾನು ಪ್ರತಾಪ್ ಸಿಂಗ್ ವರ್ಮಾ, ಕೌಶಲ್ ಕಿಶೋರ್, ಬಿ.ಎಲ್.ವರ್ಮಾ ಹಾಗೂ ಅಜಯ್ ಕುಮಾರ್‌ ಅವರು ಮೋದಿ ತಂಡ ಸೇರಿಕೊಂಡಿದ್ದಾರೆ.

ಈ ಏಳು ಮಂದಿಯ ಪೈಕಿ ಬಘೆಲ್, ಭಾನು ಪ್ರತಾಪ್ ಸಿಂಗ್ ಮತ್ತು ಕಿಶೋರ್ ದಲಿತ ನಾಯಕರಾಗಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿಯು ಈ ಸಮುದಾಯದ ನಾಯಕರಿಗೆ ಆದ್ಯತೆ ನೀಡಿದೆ ಎನ್ನಲಾಗಿದೆ. ಅಪ್ನಾ ದಳದ ಮುಖ್ಯಸ್ಥೆ, ಕುರ್ಮಿ ಜಾತಿಗೆ ಸೇರಿದ ಅನುಪ್ರಿಯಾ ಪಟೇಲ್ ಅವರ ಸಂಪುಟ ಸೇರ್ಪಡೆಯೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗಿದೆ ಎನ್ನಲಾಗಿದೆ.

ಓದಿ: 

ನೂತನ ಸಚಿವರ ಪೈಕಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕದಿಂದ ತಲಾ ನಾಲ್ವರಿದ್ದರೆ ಗುಜರಾತ್‌ನಿಂದ ಮೂವರು, ಮಧ್ಯ ಪ್ರದೇಶ ಮತ್ತು ಬಿಹಾರದಿಂದ ತಲಾ ಇಬ್ಬರಿದ್ದಾರೆ. ರಾಜಸ್ಥಾನ ಮತ್ತು ಅಸ್ಸಾಂಗೆ ತಲಾ ಒಂದು ಸಚಿವ ಸ್ಥಾನ ದೊರೆತಿದೆ.

78 ಸದಸ್ಯ ಬಲದ ಮೋದಿ ಸಂಪುಟದಲ್ಲಿ 12 ಸಚಿವರು ದಲಿತ ಸಮುದಾಯಕ್ಕೆ ಸೇರಿದವರಿದ್ದಾರೆ ಎಂದು ಮೂಲಗಳು ಹೇಳಿವೆ. ಇದೀಗ ಹೊಸದಾಗಿ 8 ಮಂದಿ ಪರಿಶಿಷ್ಟ ಪಂಗಡಗಳ ಜಾತಿಯ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ. ಇವರು ಅರುಣಾಚಲ ಪ್ರದೇಶ, ಜಾರ್ಖಂಡ್, ಛತ್ತೀಸಗಡ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಅಸ್ಸಾಂನವರಾಗಿದ್ದಾರೆ.

ಓದಿ: 

ಸಂಪುಟದಲ್ಲಿ ಒಟ್ಟು 27 ಮಂದಿ ಇತರ ಹಿಂದುಳಿದ ವರ್ಗದವರು ಇದ್ದು ಐವರು ಕ್ಯಾಬಿನೆಟ್ ದರ್ಜೆಯ ಸ್ಥಾನ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು