ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮ್ ಸ್ಕಿ, ಪ್ರಸಾದ್ ಗೋಷ್ಠಿ ರದ್ದು: ನಿರ್ಧಾರ ಸಮರ್ಥಿಸಿಕೊಂಡ ಸಂಘಟಕರು

ಟಾಟಾ ಸಾಹಿತ್ಯ ಉತ್ಸವ
Last Updated 22 ನವೆಂಬರ್ 2020, 12:31 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಸಾಹಿತ್ಯ ಉತ್ಸವದಲ್ಲಿ ಖ್ಯಾತ ಭಾಷಾಶಾಸ್ತ್ರಜ್ಞ ನೋಮ್ ಚಾಮ್‌ಸ್ಕಿ ಮತ್ತು ಪತ್ರಕರ್ತ ವಿಜಯ್ ಪ್ರಸಾದ್ ಅವರ ಆನ್‌ಲೈನ್‌ ಗೋಷ್ಠಿ ರದ್ದುಪಡಿಸಿರುವ ಕ್ರಮವು ಸಾಹಿತ್ಯ ಉತ್ಸವದ ಸಮಗ್ರತೆಯನ್ನು ಕಾಪಾಡಲು ಅಗತ್ಯವಾಗಿತ್ತು ಎಂದು ಉತ್ಸವದ ಸಂಸ್ಥಾಪಕ ಹಾಗೂ ನಿರ್ದೇಶಕ ಅನಿಲ್ ಧಾರ್‌ಕರ್ ಭಾನುವಾರ ಹೇಳಿದ್ದಾರೆ.

ನಿಗದಿಯಂತೆ ಶುಕ್ರವಾರ ರಾತ್ರಿ 9ಗಂಟೆಗೆ ‌ಚಾಮ್‌ಸ್ಕಿ ಅವರ ಹೊಸ ಪುಸ್ತಕ ‘ಇಂಟರ್‌ನ್ಯಾಷನಲಿಸಂ ಅಥವಾ ಎಕ್ಸ್‌ಟಿಂಕ್ಷನ್’ ಪುಸ್ತಕವು ಆನ್‌ಲೈನ್‌ಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಚಾಮ್‌ಸ್ಕಿ ಮತ್ತು ಪ್ರಸಾದ್ ಅವರಿಗೆ ವರ್ಚುವೆಲ್ ಕಾರ್ಯಕ್ರಮ ರದ್ದಾಗಿರುವ ಕುರಿತು ಇ–ಮೇಲ್ ಕಳುಹಿಸಲಾಗಿದೆ.

ಉತ್ಸವದಲ್ಲಿ ತಮ್ಮ ಗೋಷ್ಠಿ ಹಠಾತ್ ರದ್ದಾಗಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಚಾಮ್‌ಸ್ಕಿ ಮತ್ತು ಪ್ರಸಾದ್ ‘ಈ ಕ್ರಮವು ಸೆನ್ಸಾರ್‌ಶಿಪ್‌ನ ಫಲಿತಾಂಶವೇ’ ಎಂದು ಉತ್ಸವದ ಆಯೋಜಕರನ್ನು ಪ್ರಶ್ನಿಸಿದ್ದಾರೆ.

‘ಗೋಷ್ಠಿ ಆಯೋಜನೆಯಾಗಿದ್ದ ದಿನದಂದು ಬೆಳಿಗ್ಗೆಯೇ ಚಾಮ್‌ಸ್ಕಿ ಮತ್ತು ಪ್ರಸಾದ್ ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರ ನಡುವೆ ನಡೆದಿದ್ದ ಚರ್ಚೆಯನ್ನು ಗಮನಿಸಿದ್ದೆ. ಈ ಚರ್ಚೆಯಲ್ಲಿ ಟಾಟಾ ಸಂಸ್ಥೆಯ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಬಗ್ಗೆ ಅವರಿಬ್ಬರೂ ಸ್ಪಷ್ಟವಾಗಿ ಹೇಳಿದ್ದರು. ಟಾಟಾ ಸಮೂಹವು ಈ ಉತ್ಸವದ ಮುಖ್ಯ ಪ್ರಾಯೋಜಕ ಸಂಸ್ಥೆಯಾಗಿದೆ. ಮುಖ್ಯ ಪ್ರಾಯೋಜಕರ ಕುರಿತು ಚೋಮ್‌ಸ್ಕಿ, ಪ್ರಸಾದ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಉತ್ಸವದ ವೇದಿಕೆಯನ್ನೇ ಬಳಸಿಕೊಳ್ಳುವುದು ಸರಿಯಲ್ಲ’ ಎಂದು ಅನಿಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಚೋಮ್‌ಸ್ಕಿ ಅವರ ಕೆಲಸಗಳನ್ನು ನಾನು ಬಹುವಾಗಿ ಗೌರವಿಸುತ್ತೇನೆ. ಆದರೆ, ಅವರ ಗೋಷ್ಠಿ ರದ್ದುಪಡಿಸಿರುವ ಕ್ರಮವು ಉತ್ಸವದ ಸಮಗ್ರತೆಯನ್ನು ಕಾಪಾಡಲು ಅತ್ಯಗತ್ಯವಾಗಿತ್ತು’ ಎಂದೂ ಅನಿಲ್ ಹೇಳಿದ್ದಾರೆ.

‘ಉತ್ಸವದ ವೇದಿಕೆಯಲ್ಲಿ ನಾವು ಪೌರತ್ವ ತಿದ್ದುಪಡಿ ಕಾಯ್ದೆ, ಆದಿವಾಸಿಗಳ ಹತ್ಯೆ, ಭೂ ಕಾಯ್ದೆ ತಿದ್ದುಪಡಿ ಸೇರಿದಂತೆ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಕಾರ್ಪೋರೇಟ್ ಕಂಪನಿಗಳ ಕಾರ್ಯನಿರ್ವಹಣೆ ಬಗ್ಗೆ ಚರ್ಚೆ ಮಾಡಬೇಕೆಂದುಕೊಂಡಿದ್ದೆವು’ ಎಂದು ಚಾಮ್‌ಸ್ಕಿ ಮತ್ತು ಪ್ರಸಾದ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT