ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ: ತನಿಖೆ ವಿಳಂಬಕ್ಕೆ ‘ಸುಪ್ರೀಂ’ ಕಳವಳ

Last Updated 26 ಆಗಸ್ಟ್ 2021, 1:33 IST
ಅಕ್ಷರ ಗಾತ್ರ

ನವದೆಹಲಿ:ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐಯಲ್ಲಿ ಸಂಸದರು, ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಯಲ್ಲಿ ಆಗುತ್ತಿರುವ ಭಾರಿ ವಿಳಂಬದ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ. ಇಂತಹ ಪ್ರಕರಣಗಳ ತ್ವರಿತ ತನಿಖೆಗೆ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿ ವಿವರವಾದ ಆದೇಶ ಪ್ರಕಟಿಸಲಾಗುವುದು. ಆದರೆ, ಜಾರಿ ನಿರ್ದೇಶನಾಲಯ ಅಥವಾ ಸಿಬಿಐಯಂತಹ ಸಂಸ್ಥೆಯ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಹೀಗೆ ವ್ಯಕ್ತಪಡಿಸುವ ಅಭಿಪ್ರಾಯವು ಈ ಸಂಸ್ಥೆಗಳ ನೈತಿಕಸ್ಥೈರ್ಯ ಕುಸಿಯಲು ಕಾರಣ ಆಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರ ಪೀಠವು ಹೇಳಿದೆ.

‘ಈ ನ್ಯಾಯಾಲಯದಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳು ಇವೆ. ಈ ಪ್ರಕರಣಗಳ ಯಾವ ವರದಿಯೂ ಸಮರ್ಪಕ ಆಗಿಲ್ಲ ಎಂದು ಹೇಳಲು ವಿಷಾದ ಎನಿಸುತ್ತದೆ, ತುಷಾರ್‌ ಮೆಹ್ತಾ (ಸಾಲಿಸಿಟರ್‌ ಜನರಲ್‌) ಅವರೇ. 10–15 ವರ್ಷಗಳಿಂದ ಆರೋಪಪಟ್ಟಿಯನ್ನೇ ಸಲ್ಲಿಸದೇ ಇರುವುದಕ್ಕೆ ಯಾವ ಕಾರಣವನ್ನೂ ಕೊಟ್ಟಿಲ್ಲ. ನೂರಾರು ಕೋಟಿ ರೂಪಾಯಿಯ ಆಸ್ತಿ ಮುಟ್ಟುಗೋಲು ಹಾಕಿ ಸುಮ್ಮನಾಗುವುದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಪೀಠವು ಹೇಳಿದೆ.

ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಜನಪ್ರತಿನಿಧಿಗಳಿಗೆ ಆಜೀವ ನಿಷೇಧ ಹೇರಬೇಕು, ಪ್ರಕರಣಗಳ ವಿಚಾರಣೆಯು ತ್ವರಿತವಾಗಿ ನಡೆಯಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯನ್ನು ಪೀಠವು ನಡೆಸಿತು.

ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯಲ್ಲಿ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಯ ಬಗೆಗಿನ ಸ್ಥಿತಿಗತಿ ವರದಿಯು ಆಘಾತಕಾರಿಯಾಗಿದೆ. ತನಿಖೆಯು ತ್ವರಿತಗೊಳ್ಳಲು ಸರ್ಜರಿ ಅಗತ್ಯ ಇದೆ ಎಂದು ಪ್ರಕರಣದಲ್ಲಿ ನ್ಯಾಯಾಲಯದ ಸಹಾಯಕರಾಗಿ ನೇಮಕವಾಗಿರುವ ವಿಜಯ್‌ ಹನ್ಸರಿಯಾ ಹೇಳಿದರು.

‘ಇ.ಡಿ. ಮತ್ತು ಸಿಬಿಐ ಕುರಿತ ವರದಿಗಳನ್ನು ನ್ಯಾಯಾಲಯವು ಗಮನಿಸಿದೆ. ತನಿಖೆಯನ್ನು ತ್ವರಿತಗೊಳಿಸಿ ಎಂದು ಹೇಳುವುದು ಸುಲಭ. ಆದರೆ, ಹಲವು ಸಮಸ್ಯೆಗಳು ಇವೆ ಎಂಬುದು ನಮಗೆ ತಿಳಿದಿದೆ. ನ್ಯಾಯಾಧೀಶರು, ನ್ಯಾಯಾಲಯಗಳು, ಮೂಲಸೌಕರ್ಯ ಎಲ್ಲದರ ಕೊರತೆಯೂ ಇದೆ. ಇ.ಡಿ.ಯಲ್ಲಿ 2012ರಿಂದ 76 ಪ್ರಕರಣಗಳು ಬಾಕಿ ಇವೆ. ಸಿಬಿಐಯಲ್ಲಿ ಜೀವಪರ್ಯಂತ ಶಿಕ್ಷೆ ವಿಧಿಸಬಹುದಾದ 58 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಹಳೆಯದು 2000ನೇ ಇಸವಿಯಲ್ಲಿ ದಾಖಲಾಗಿದೆ’ ಎಂದು ರಮಣ ಅವರು ಹೇಳಿದ್ದಾರೆ.

‘ಪ್ರಕರಣ ರದ್ದು ರಾಜ್ಯದ ಅಧಿಕಾರ’
‘ದುರುದ್ದೇಶಪೂರಿತ’ವಾಗಿ ದಾಖಲಿಸಲಾದ ಅಪರಾಧ ಪ್ರಕರಣಗಳನ್ನು ರದ್ದುಪಡಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಆದರೆ, ಈ ಪ್ರಕರಣಗಳು ಸಂಬಂಧಪಟ್ಟ ಹೈಕೋರ್ಟ್‌ನ ಪರಿಶೀಲನೆಗೆ ಒಳಪಟ್ಟಿರಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.ದುರುದ್ದೇಶದಿಂದ ದಾಖಲಿಸಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಕ್ಕೆ ತಾನು ವಿರುದ್ಧ ಅಲ್ಲ ಎಂದೂ ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT