ನವದೆಹಲಿ: ‘ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ನೀರವ್ ಮೋದಿ ಜೊತೆ ಸಹ ಆರೋಪಿಯಾಗಿರುವ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ರೆಡ್ ಕಾರ್ನರ್ ನೋಟಿಸ್ ಅನ್ನು ಮರು ಜಾರಿಗೊಳಿಸುವಂತೆ ಕಮಿಷನ್ ಫಾರ್ ಕಂಟ್ರೋಲ್ ಆಫ್ ಇಂಟರ್‌ಪೋಲ್ಸ್ ಫೈಲ್ಸ್‌ಗೆ (ಸಿಸಿಎಫ್) ಮನವಿ ಮಾಡಲಾಗಿದೆ’ ಎಂದು ಸಿಬಿಐ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ) ಮನವಿ ಮೇರೆಗೆ ಇಂಟರ್‌ಪೋಲ್, 2018ರಲ್ಲಿ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಇದರ ವಿರುದ್ಧ ಆತ ಸಲ್ಲಿಸಿದ್ದ ಮೇಲ್ಮನವಿಯನ್ನು 2020ರಲ್ಲಿ ತಿರಸ್ಕರಿಸಲಾಗಿತ್ತು.
‘ತಮ್ಮ ವಿರುದ್ಧ ಹೊರಡಿಸಲಾಗಿರುವ ನೋಟಿಸ್ ರದ್ದುಗೊಳಿಸುವಂತೆ ಕೋರಿ ಚೋಕ್ಸಿ 2022ರಲ್ಲಿ ಸಿಸಿಎಫ್ ಮೊರೆ ಹೋಗಿದ್ದರು. ಚೋಕ್ಸಿ ವಿರುದ್ಧದ ಆರೋಪವನ್ನು ಸಾಬೀತುಪಡಿಸುವುದಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇರುವುದಾಗಿ ಅಭಿಪ್ರಾಯಪಟ್ಟಿದ್ದ ಐವರು ಸದಸ್ಯರನ್ನೊಳಗೊಂಡ ಸಿಸಿಎಫ್ ಮಂಡಳಿಯು 2022ರ ನವೆಂಬರ್‌ನಲ್ಲಿ ರೆಡ್ ಕಾರ್ನರ್ ನೋಟಿಸ್ ರದ್ದುಗೊಳಿಸಿತ್ತು’ ಎಂದು ಸಿಬಿಐ ಪ್ರಕಟಣೆ ವಿವರಿಸಿದೆ.
‘ಹೊಸ ಮಾಹಿತಿಗಳ ಆಧಾರದಲ್ಲಿ ಹಾಗೂ ತಾನು ನೀಡಿದ ತೀರ್ಪಿನಲ್ಲಾಗಿರುವ ಗಂಭೀರ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ನಿರ್ಧಾರ ಬದಲಾಯಿಸಬೇಕು. ಚೋಕ್ಸಿ ವಿರುದ್ಧದ ರೆಡ್ ಕಾರ್ನರ್ ನೋಟಿಸ್ ಅನ್ನು ಮರು ಜಾರಿಗೊಳಿಸಬೇಕು ಎಂದು ಸಿಸಿಎಫ್‌ಗೆ ವಿನಂತಿಸಲಾಗಿದೆ’ ಎಂದು ಮಾಹಿತಿ ನೀಡಿದೆ.
‘ಕಾಟಾಚಾರದ ನಿರ್ಧಾರ ಪ್ರಕಟಿಸುವ ಭರದಲ್ಲಿ ಸಿಸಿಎಫ್‌ನಿಂದ ಗಂಭೀರ ನ್ಯೂನ್ಯತೆಗಳು ಉಂಟಾಗಿವೆ. ಈ ಸಂಸ್ಥೆಯು ಕಾರ್ಯವಿಧಾನದ ನಿಯಮಗಳನ್ನೂ ಉಲ್ಲಂಘಿಸಿದೆ’ ಎಂದು ಸಿಬಿಐ ಹೇಳಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13,000 ಕೋಟಿ ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಚೋಕ್ಸಿ ಸದ್ಯ ತಲೆಮರೆಸಿಕೊಂಡಿದ್ದಾರೆ.
***
ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
ನವದೆಹಲಿ: ಚೋಕ್ಸಿ ವಿರುದ್ಧದ ‘ರೆಡ್ ನೋಟಿಸ್’ ರದ್ದುಪಡಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.
‘ವಿಪಕ್ಷಗಳ ವಿರುದ್ಧ ಸಿಬಿಐ, ಇ.ಡಿ ಅಸ್ತ್ರ ಪ್ರಯೋಗಿಸುವ ಕೇಂದ್ರ ಸರ್ಕಾರವು ತನ್ನ ಪರಮಾಪ್ತರನ್ನು ಪ್ರಕರಣದಿಂದ ಖುಲಾಸೆಗೊಳಿಸುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.
‘ಮೋದಾನಿ’ ಮಾದರಿ ಎಂದರೆ ಮೊದಲು ಲೂಟಿ ಮಾಡಿ, ಬಳಿಕ ಯಾವುದೇ ಶಿಕ್ಷೆ ಇಲ್ಲದೆಯೇ ಪ್ರಕರಣದಿಂದ ಬಿಡುಗಡೆಯಾಗಿ ಎಂದರ್ಥ’ ಎಂದು ವ್ಯಂಗ್ಯವಾಡಿದ್ದಾರೆ.
‘ಭ್ರಷ್ಟರಿಗೆ ರಕ್ಷಣೆ ನೀಡುತ್ತಿರುವವರು ದೇಶಪ್ರೇಮದ ಕುರಿತು ಮಾತನಾಡುವುದು ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.