ಬುಧವಾರ, ಮೇ 25, 2022
29 °C
10 ವರ್ಷಗಳಲ್ಲೇ ಜಮ್ಮು ಮತ್ತು ಕಾಶ್ಮೀರ ಗಡಿ ಪ್ರದೇಶದಲ್ಲಿ ಗಣನೀಯ ಇಳಿಕೆ

ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಇಳಿಮುಖ

ಸಿದ್ದರಾಜು ಎಂ Updated:

ಅಕ್ಷರ ಗಾತ್ರ : | |

ಶ್ರೀನಗರ: ಪಾಕ್‌ ಗಡಿ ಹಂಚಿಕೊಂಡಿರುವ ದೇಶದ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ (ಎಲ್‌ಒಸಿ) ಹಾಗೂ ಅಂತರರಾಷ್ಟ್ರೀಯ ಗಡಿ (ಐಬಿ) ಪ್ರದೇಶಗಳಲ್ಲಿ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕದನವಿರಾಮ ಉಲ್ಲಂಘನೆ ಪ್ರಕರಣ ಇಳಿಮುಖ ಕಂಡಿದೆ.

ಭಾರತ ಹಾಗೂ ಪಾಕಿಸ್ತಾನದ ಸೇನೆಗಳು ಫೆ.25ರಂದು ಕದನ ವಿರಾಮ ಒಪ್ಪಂದಕ್ಕೆ ಮತ್ತೆ ಒಪ್ಪಿಗೆ ಸೂಚಿಸಿದ ನಂತರ 2021ರ ಮೊದಲ ಆರು ತಿಂಗಳುಗಳಲ್ಲಿ 664 ಪ್ರಕರಣ ವರದಿಯಾಗಿದ್ದು, ಅವುಗಳಲ್ಲಿ ಶೇ 99ರಷ್ಟು ಘಟನೆಗಳು ಜನವರಿ ಹಾಗೂ ಫೆಬ್ರುವರಿಯಲ್ಲಿ ನಡೆದಿವೆ. ಜನವರಿಯಲ್ಲಿ 380, ಫೆಬ್ರುವರಿಯಲ್ಲಿ 278 ಕದನ ವಿರಾಮ ಘಟನೆಗಳು ಜರುಗಿದ್ದು, ಈ ವೇಳೆ ನಡೆದ ಪರಸ್ಪರ ಗುಂಡಿನ ದಾಳಿಯಲ್ಲಿ ಯಾವುದೇ ನಾಗರಿಕರು ಹತರಾಗಿಲ್ಲ.

ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಇದರಲ್ಲಿ 221 ಕಿ.ಮೀ ಅಂತರರಾಷ್ಟ್ರೀಯ ಗಡಿ ಹಾಗೂ 740 ಕಿ.ಮೀ ಗಡಿ ನಿಯಂತ್ರಣ ರೇಖೆಯು ಜಮ್ಮು ಮತ್ತು ಕಾಶ್ಮೀರದ ಭಾಗದಲ್ಲಿದೆ. 2003ರಲ್ಲಿ ಭಾರತ ಮತ್ತು ಪಾಕ್‌ ಗಡಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಗಡಿ ನಿಯಂತ್ರಣ ರೇಖೆ ಹಾಗೂ ಅಂತರರಾಷ್ಟ್ರೀಯ ಗಡಿಯಲ್ಲಿ ಅತಿಹೆಚ್ಚು ಕದನ ವಿರಾಮ ಉಲ್ಲಂಘನೆ 2020ರಲ್ಲಿ ವರದಿಯಾಗಿತ್ತು. ಈ ವರ್ಷ ಪಾಕ್‌ ಸೇನೆಯು 5,100 ಬಾರಿ ಕದನ ವಿರಾಮ ಉಲ್ಲಂಘಿಸಿದ ಪರಿಣಾಮ 36 ನಾಗರಿಕರು ಹತ್ಯೆಯಾಗಿ, 130 ಮಂದಿ ಗಾಯಗೊಂಡಿದ್ದರು.

ನಂತರ 2019ರಲ್ಲಿ 3,289 ಪ್ರಕರಣ ವರದಿಯಾಗುವ ಮೂಲಕ ಅತಿಹೆಚ್ಚು ಕದನ ವಿರಾಮ ಉಲ್ಲಂಘನೆಯಾಗಿತ್ತು. 2018ರಲ್ಲಿ ಸುಮಾರು 3,000, 2017ರಲ್ಲಿ 971 ಕದನ ವಿರಾಮ ಉಲ್ಲಂಘನೆ ಪ್ರಕರಣ ವರದಿಯಾಗಿತ್ತು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು 2003 ರಲ್ಲಿ ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವ ಮುನ್ನ 2002ರಲ್ಲಿ 5,800 ಬಾರಿ ಕದನ ವಿರಾಮ ಉಲ್ಲಂಘನೆಯಾಗಿತ್ತು. 2003ರ ದ್ವಿಪಕ್ಷೀಯ ಒಪ್ಪಂದದ ನಂತರ ಸತತ ಮೂರು ವರ್ಷಗಳು (2004,2005, 2006) ಗಡಿಯಲ್ಲಿ ಒಂದೇ ಒಂದು ಕದನ ವಿರಾಮ ಉಲ್ಲಂಘನೆ ಪ್ರಕರಣ ವರದಿಯಾಗಿರಲಿಲ್ಲ.

2007ರಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆಯನ್ನು ಪುನರ್‌ ಆರಂಭಿಸುವ ಮೂಲಕ ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘನೆ ಮಾಡಲು ಆರಂಭಿಸಿತು. 2007ರಲ್ಲಿ 21, 2008ರಲ್ಲಿ 77 ಪ್ರಕರಣ ವರದಿಯಾಗಿದೆ. 2009ರಿಂದ 2013ರವರೆಗೆ ಉಲ್ಲಂಘನೆ ಪ್ರಕರಣ ಕ್ರಮೇಣ ಹೆಚ್ಚಳ ಕಂಡು ಬಂದಿದ್ದು, 2013, 2012, 2011, 2010 ಹಾಗೂ 2009ರಲ್ಲಿ ಕ್ರಮವಾಗಿ 347,114, 62, 44 ಹಾಗೂ 28 ಪ್ರಕರಣ ವರದಿಯಾಗಿವೆ.

1990ರಿಂದ ಈವರೆಗೆ ಗಡಿಯಲ್ಲಿ ಪಾಕ್‌ ನಡೆಸಿದ ಶೆಲ್‌ ದಾಳಿಯಿಂದ ನೂರಕ್ಕೂ ಹೆಚ್ಚು ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಗವಿಕಲರಾಗಿದ್ದಾರೆ. ಮೂರು ದಶಕಗಳಲ್ಲಿ ನಡೆದ ಷೆಲ್‌ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರ ಗಡಿಯ ಜನರು ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಜಾನುವಾರು, ಆಸ್ತಿ–ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ.

2021ರ ಫೆಬ್ರುವರಿ 25ರಂದು ಪರಸ್ಪರ ಮಾತುಕತೆ ನಡೆಸಿದ್ದ ಭಾರತ ಹಾಗೂ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು, ‘ಎರಡೂ ಕಡೆಯ ಗಡಿ ನಿಯಂತ್ರಣ ರೇಖೆ ಪ್ರದೇಶ ಹಾಗೂ ಇತರೆ ವಲಯಗಳಲ್ಲೂ ಕಡ್ಡಾಯವಾಗಿ ಕದನ ವಿರಾಮ ಒಪ್ಪಂದವನ್ನು ಪಾಲಿಸಲಾಗುವುದು. ಈ ಒಪ್ಪಂದವು ಫೆ.24ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು