ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ವಿಸ್ತಾ: ಭೂ ಬಳಕೆ ಬದಲಾವಣೆ ಪ್ರಶ್ನಿಸಿದ್ದ ಅರ್ಜಿ ವಜಾ

Last Updated 23 ನವೆಂಬರ್ 2021, 20:00 IST
ಅಕ್ಷರ ಗಾತ್ರ

ನವದೆಹಲಿ: ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿ, ಇಲ್ಲಿನ ‘ಲ್ಯೂಟೆನ್ಸ್‌’ನಲ್ಲಿ, ಉಪ ರಾಷ್ಟ್ರಪತಿಯ ಅಧಿಕೃತ ನಿವಾಸ ನಿರ್ಮಾಣಕ್ಕಾಗಿ ಭೂ ಬಳಕೆ ಯೋಜನೆ ಬದಲಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು, ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಎಲ್ಲದರ ಬಗ್ಗೆಯೂ ಟೀಕಿಸಬಹುದು, ಆದರೆ, ಅದು ರಚನಾತ್ಮಕವಾಗಿರಬೇಕು ಎಂದ ಸುಪ್ರೀಂ ಕೋರ್ಟ್, ‘ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯವಾಗಿದೆ. ಭೂಬಳಕೆಯಲ್ಲಿನ ಬದಲಾವಣೆ ಸಮರ್ಥಿಸಿ, ಅಧಿಕಾರಿಗಳು ಸಾಕಷ್ಟು ವಿವರಣೆ ನೀಡಿದ್ದಾರೆ. ಹೀಗಾಗಿ, ಮತ್ತೆ ಈ ವಿಷಯವಾಗಿ ಪರಿಶೀಲನೆಯ ಅಗತ್ಯ ಕಾಣುತ್ತಿಲ್ಲ. ಅರ್ಜಿಯನ್ನು ವಜಾ ಮಾಡುವ ಮೂಲಕ, ಈ ವಿವಾದವನ್ನು ಇಲ್ಲಿಗೆ ಕೊನೆಗೊಳಿಸುತ್ತೇವೆ’ ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ನ್ಯಾಯಪೀಠ ಹೇಳಿತು.

ಸಾರ್ವಜನಿಕ ಮನರಂಜನೆಯ ಉದ್ದೇಶಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು, ನಿವಾಸ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗಿದೆ. ಇದು ಸಾರ್ವಜನಿಕ ಹಿತಕ್ಕೆ ವಿರುದ್ಧವಾಗಿದೆ. ಉಪ ರಾಷ್ಟ್ರಪತಿಗಳ ನಿವಾಸ ನಿರ್ಮಾಣಕ್ಕೆ ತಮ್ಮ ಆಕ್ಷೇಪ ಇಲ್ಲ; ಆದರೆ, ಆರು ಎಕರೆಯಷ್ಟು ಹಸಿರು ಪ್ರದೇಶವು ಅದಕ್ಕಾಗಿ ಬಳಕೆಯಾಗುತ್ತಿದೆ. ಮುಕ್ತ ಜಾಗ ಹಾಗೂ ಹಸಿರು ಪ್ರದೇಶದ ರಕ್ಷಣೆಯಷ್ಟೇ ತಮ್ಮ ಕಾಳಜಿ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

‘ಉಪ ರಾಷ್ಟ್ರಪತಿಯ ನಿವಾಸವನ್ನು ಎಲ್ಲಿ ನಿರ್ಮಿಸಬೇಕು ಎಂಬುದನ್ನೂ ಇನ್ನು ಮೇಲೆ ಜನಸಾಮಾನ್ಯರನ್ನು ಕೇಳಬೇಕೇ’ ಎಂದುನ್ಯಾಯಮೂರ್ತಿಗಳಾದ ದಿನೇಶ್‌ ಮಾಹೇಶ್ವರಿ ಮತ್ತು ಸಿ.ಟಿ. ರವಿಕುಮಾರ್‌ ಅವರೂ ಇದ್ದ ನ್ಯಾಯಪೀಠವು‌ ಪ್ರಶ್ನಿಸಿತು.

ಇಲ್ಲಿ ಯಾರದೋ ಖಾಸಗಿ ಆಸ್ತಿಯನ್ನು ನಿರ್ಮಾಣ ಮಾಡುತ್ತಿಲ್ಲ. ಪ್ರಮಾಣಪತ್ರ ಪ್ರಕಾರ, ಇಲ್ಲಿ ನಿರ್ಮಾಣವಾಗುತ್ತಿರುವುದು ಉಪ ರಾಷ್ಟ್ರಪತಿಯ ನಿವಾಸ. ಅದನ್ನು ಬೇರೆ ಎಲ್ಲೋ ಹೇಗೆ ಸ್ಥಳಾಂತರಿಸಲಾಗುತ್ತದೆ‌ ಎಂದು ಕೇಳಿದ ನ್ಯಾಯಪೀಠವು, ಯೋಜನೆ ರೂಪಿಸಿದವರು ಈ ಎಲ್ಲ ಅಂಶಗಳನ್ನೂ ಗಮನಿಸಿದ್ದಾರೆ ಎಂದು ಹೇಳಿತು.

ಆದರೆ, ಅದು ಯೋಜನೆಗೆ ಸಂಬಂಧಿಸಿದ ವಿಷಯ. ಅದಲ್ಲದೇ, ಅರ್ಜಿದಾರರು ಆರೋಪಿಸುವಂತೆ ಈಗ ಉಪ ರಾಷ್ಟ್ರಪತಿಯ ನಿವಾಸಕ್ಕೆ ಬಳಕೆಯಾಗುತ್ತಿರುವ ಪ್ರದೇಶವು ಮನರಂಜನಾ ಚಟುವಟಿಕೆಗೆ ಮೀಸಲಾಗಿದ್ದ ಮೈದಾನವೇ ಅಲ್ಲ. ಹಾಗೊಂದು ವೇಳೆ ಈ ಹಿಂದೆ ಅದಕ್ಕಾಗಿ ಬಳಕೆಯಾಗಿದ್ದರೂ ಸಮಗ್ರ ಅಭಿವೃದ್ಧಿ ಯೋಜನೆಗೆ ಅಗತ್ಯವಾದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಬದಲಾವಣೆ ಮಾಡಬಾರದೇ ಎಂದೂ ನ್ಯಾಯಪೀಠ ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT