ಚರ್ಚೆಗೆ ಸಿದ್ಧ, ಕೃಷಿ ಕಾಯ್ದೆಗಳ ವಾಪಸಾತಿ ಇಲ್ಲ: ಕೃಷಿ ಸಚಿವ ತೋಮರ್

ಗ್ವಾಲಿಯರ್: ‘ಕೃಷಿಯ ಮೂರು ತಿದ್ದುಪಡಿ ಕಾಯ್ದೆಗಳ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ, ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
‘ದೇಶದ ವಿವಿಧೆಡೆ ಕೃಷಿಕರ ಹಲವು ಸಂಘಟನೆಗಳು ಈ ಕಾಯ್ದೆಗಳನ್ನು ಬೆಂಬಲಿಸಿವೆ’ ಎಂದು ಪ್ರತಿಪಾದಿಸಿದರು. ದೆಹಲಿ ಗಡಿಯಲ್ಲಿ ಗಾಜೀಪುರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪ್ರತಿಭಟನಾನಿರತ ಕೃಷಿಕರ ನಡುವೆ ಘರ್ಷಣೆ ನಡೆದ ಹಿಂದೆಯೇ ಸಚಿವರಿಂದ ಈ ಹೇಳಿಕೆ ಹೊರಬಿದ್ದಿದೆ. ಘರ್ಷಣೆಯಲ್ಲಿ ಉಭಯ ಬಣಗಳವರು ಗಾಯಗೊಂಡಿದ್ದರು.
ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆ ಹೊರತುಪಡಿಸಿ ಬೇರಾವುದೇ ಬೇಡಿಕೆ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂಬುದನ್ನು ರೈತ ಸಂಘಟನೆಗಳಿಗೂ ತಿಳಿಸಿದ್ದೇವೆ ಎಂದು ತೋಮರ್ ತಿಳಿಸಿದರು. ರೈತರ ಪ್ರಮುಖ ಬೇಡಿಕೆ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬುದೇ ಆಗಿದೆ ಎಂಬ ಪ್ರಶ್ನೆಗೆ ಈ ಮಾತು ಹೇಳಿದರು.
ಉಲ್ಲೇಖಿತ ಕೃಷಿ ಕಾಯ್ದೆಗಳು ರೈತರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ. ಕೃಷಿ ಪರಿಣತರ ಸತತ 30 ವರ್ಷದ ಕಸರತ್ತಿನಿಂದ ಈ ಕಾಯ್ದೆಗಳು ರೂಪಿತವಾಗಿವೆ ಎಂದು ಸಚಿವರು ಸಮರ್ಥಿಸಿಕೊಂಡರು.
ಮೂರು ತಿದ್ದುಪಡಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಪಡಿಸಿ ಕೃಷಿಕರು 2020ರ ನವೆಂಬರ್ ನಿಂದಲೂ ರಾಜಧಾನಿ ನವದೆಹಲಿಗೆ ಸಂಪರ್ಕ ಕಲ್ಪಿಸುವ ಗಡಿಭಾಗದ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ... ಜೆಟ್ ಏರ್‌ವೇಸ್‌ನಲ್ಲಿ ₹ 1,375 ಕೋಟಿ ಹೂಡಿಕೆ ಮಾಡಲಿರುವ ಜಲನ್ ಕಲ್‌ರಾಕ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.