ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯಲಿ ಎಂದು ಕೇಂದ್ರ ಬಯಸಿತ್ತು: ಶಿವಸೇನಾ ಆರೋಪ

Last Updated 28 ಜನವರಿ 2021, 8:30 IST
ಅಕ್ಷರ ಗಾತ್ರ

ಮುಂಬೈ: ‘ರೈತರ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು, ಪ್ರತಿಭಟನೆಗೆ ಕೆಟ್ಟ ಹೆಸರು ಬರಲಿ ಎಂಬುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಇಚ್ಛೆಯಾಗಿದೆ’ ಎಂದು ಶಿವಸೇನಾ ಆರೋಪಿಸಿದೆ.

ಈ ಬಗ್ಗೆ ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿದೆ.

ಆದರೆ, ಶಿವಸೇನಾದ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ‘ಕೇಂದ್ರ ಸರ್ಕಾರದ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆ’ ಎಂದಿದೆ.

‘ಹೊಸ ಕೃಷಿ ಕಾನೂನಿನ ವಿರುದ್ಧ ರೈತರು 60 ದಿನಗಳಿಂದ ದೆಹಲಿ ಗಡಿ ಪ್ರದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಈ ವೇಳೆ ಅವರು ತಾಳ್ಮೆಯನ್ನು ಕಳೆದುಕೊಂಡಿಲ್ಲ. ಅಲ್ಲದೆ ಅವರ ನಡುವೆ ಬಿರುಕು ಕೂಡ ಬಂದಿರಲಿಲ್ಲ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘ರೈತರ ಪ್ರತಿಭಟನೆಯನ್ನು ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರನ್ನು ಕೆರಳಿಸಿ, ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುವಂತೆ ಪ್ರಚೋದಿಸಲಾಗುತ್ತಿದೆ. ಅವರ ಪ್ರತಿಭಟನೆಗೆ ಕೆಟ್ಟ ಹೆಸರು ಬರಲಿ ಎಂಬುದು ಕೇಂದ್ರ ಸರ್ಕಾರ ಬಯಕೆಯಾಗಿದೆ. ಕೇಂದ್ರ ಸರ್ಕಾರದ ಈ ಇಚ್ಛೆ ಜನವರಿ 26 ರಂದು ನೆರವೇರಿತ್ತು. ಆದರೆ ಈ ಘಟನೆಯೂ ರೈತರಿಗೆ ಮಾತ್ರವಲ್ಲದೇ ದೇಶಕ್ಕೂ ಕೆಟ್ಟ ಹೆಸರು ತಂದಿದೆ’ ಎಂದು ಶಿವಸೇನಾ ಸಂಪಾದಕೀಯದಲ್ಲಿ ದೂರಿದೆ.

‘ರೈತರು ಕಾನೂನು ಮುರಿದಿದ್ದಾರೆ ಎಂದು ಹೇಳುವುದು ಸುಲಭ. ಆದರೆ ಅವರು ಹಲವು ದಿನಗಳಿಂದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮನವಿ ಮಾಡುತ್ತಿದ್ದಾರೆ. ಅದಕ್ಕೆ ಬೆಲೆ ಇಲ್ಲವೇ. ಪಂಜಾಬ್‌ ರೈತರ ಸ್ವಾಭಿಮಾನ ಕೇಂದ್ರ ಸರ್ಕಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ’ ಎಂದು ಶಿವಸೇನಾ ದೂರಿದೆ.

‘ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ರೈತರನ್ನಷ್ಟೇ ದೂಷಿಸುವುದು ಸರಿಯಲ್ಲ. ಸರ್ಕಾರ ತನಗೆ ಬೇಕಾಗಿದ್ದನ್ನು ಮಾಡಿದೆ. ಆದರೆ ಇದರಿಂದಾಗಿ ರೈತರು ಮತ್ತು ಪೊಲೀಸರು ತೊಂದರೆಗೆ ಒಳಗಾಗಿದ್ದಾರೆ’ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

‘ಹಿಂಸಾತ್ಮಕ ಪ್ರತಿಭಟನೆಯ ಒಬ್ಬ ನಾಯಕ ದೀಪ್ ಸಿಧು ಬಿಜೆಪಿಯೊಂದಿಗೆ ಸಂಬಂಧವನ್ನು ಹೊಂದಿದ್ದು, ಎರಡು ತಿಂಗಳಿನಿಂದ ರೈತರನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದ. ಆದರೆ ರೈತರು ಮಾತ್ರ ಶಾಂತವಾಗಿದ್ದರು’ ಎಂದು ಶಿವಸೇನಾ ಹೇಳಿದೆ.

ಮಹಾರಾಷ್ಟ್ರದ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ ಅವರು ಈ ಆರೋಪವನ್ನು ಅಲ್ಲಗೆಳೆದಿದ್ದಾರೆ.

‘ಕೆಲವರಿಗೆ ರಾಜಕೀಯ ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ಅವರು ರೈತರ ಪ್ರತಿಭಟನೆಯ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕೇಶವ್‌ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT