ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆಯಲ್ಲಿ ಮೊಳಗಿತು ‘ಜೈ ಜವಾನ್ ಜೈ ಕಿಸಾನ್‌‘

ಟ್ರಕ್‌, ಕುದುರೆ, ಕ್ರೇನ್‌ಗಳ ಮೂಲಕ ಪ್ರತಿಭಟನೆಯಲ್ಲಿ ಕಂಡ ರೈತ ಸಮೂಹ
Last Updated 26 ಜನವರಿ 2021, 8:52 IST
ಅಕ್ಷರ ಗಾತ್ರ

ನವದೆಹಲಿ: ‘ರಂಗ್ ದೇ ಬಸಂತಿ‘ ಮತ್ತು ಜೈ ಜವಾನ್ ಜೈ ಕಿಸಾನ್‘ ಘೋಷಣೆಗಳನ್ನು ಕೂಗುತ್ತಾ ಟ್ರ್ಯಾಕ್ಟರ್‌, ಬೈಕ್‌, ಕುದುರೆ, ಕ್ರೇನ್‌ಗಳ ಮೇಲೆ ಕುಳಿತ ನೂರಾರು ರೈತರು ಪೊಲೀಸರು ನಿಗದಿಪಡಿಸಿದ ದಾರಿಯಲ್ಲಿ ಸಾಗುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸ್ಥಳೀಯರು ಮೆರವಣಿಗೆಯಲ್ಲಿ ಸಾಗುತ್ತಿದ್ದ ರೈತರ ಮೇಲೆ ಹೂವಿನ ಮಳೆಗರೆದರು..

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ವಿವಿಧ ಗಡಿ ಭಾಗಗಳಲ್ಲಿ ಮಂಗಳವಾರ ಹತ್ತಾರು ರೈತ ಸಂಘಟನೆಗಳು ಭಾಗವಹಿಸಿದ್ದ ‘ಟ್ರ್ಯಾಕ್ಟರ್ ರ‍್ಯಾಲಿ‘ಯಲ್ಲಿ ಕಂಡು ಬಂದ ದೃಶ್ಯಗಳಿವು.

ದೆಹಲಿಯ ರಾಜ್‌ಪತ್‌ನಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ಮುಗಿದ ಮೇಲೆ, ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಅದರಂತೆ, ಕಿಸಾನ್ ಸಂಯುಕ್ತ ಮೋರ್ಚಾದ ರೈತ ಸಂಘಟನೆಗಳು, ಮಧ್ಯಾಹ್ನ 12 ರ ನಂತರ ‘ಟ್ರ್ಯಾಕ್ಟರ್ ರ‍್ಯಾಲಿ‘ ಆರಂಭಿಸಿದರು.

ಸಾವಿರಾರು ರೈತರು ಧ್ವಜಗಳಿಂದ ಅಲಂಕರಿಸಲ್ಪಟ್ಟ ವಾಹನಗಳ ಮೇಲೆ ನಿಂತು 'ಐಸಾ ದೇಶ್ ಹೈ ಮೇರಾ' ಮತ್ತು 'ಸಾರೆ ಜಹಾನ್ ಸೆ ಅಚ್ಚಾ' ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಕ್ರೇನ್‌ಗಳೊಂದಿಗೆ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರೈತರು, ಕ್ರೇನ್‌ಗಳ ಮುಂಭಾಗವನ್ನು ತಾತ್ಕಾಲಿ ವೇದಿಕೆಯನ್ನಾಗಿ ಮಾಡಿಕೊಂಡಿದ್ದರು.

‘ರೈತರು ಹೊಲ ಉಳುವುದಕ್ಕೆ ಸೀಮತವಾಗಿದ್ದಾರೆ‘ ಎಂದು ಜನರು ಭಾವಿಸಿದ್ದರು. ಆದರೆ, ರೈತರು ಹೊಲವನ್ನೂ ಉಳುತ್ತಾರೆ. ಅಗತ್ಯ ಬಿದ್ದರೆ ಬೈಕ್‌, ಟ್ರ್ಯಾಕ್ಟರ್‌, ಕುದರೆ ಓಡಿಸುತ್ತಾ ಪ್ರತಿಭಟನೆಯನ್ನೂ ಮಾಡುತ್ತಾರೆ‘ ಎಂಬುದನ್ನೂ ಈ ಐತಿಹಾಸಿಕ ರ್‍ಯಾಲಿ ಮೂಲಕ ತಿಳಿಸಿದ್ದೇವೆ‘ ಎಂದು ಕುದುರೆ ಸವಾರಿ ಮೂಲಕ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಗಗನ್ ಸಿಂಗ್ ಹೇಳಿದರು.

ರ‍್ಯಾಲಿಯಲ್ಲಿದ್ದ ಟ್ರ್ಯಾಕ್ಟರ್‌ ಚಾಲನೆ ಮಾಡುತ್ತಿದ್ದ ಮಹಿಳೆ ಪರಮಜೀತ್ ಬೀಬಿ, ‘ಮಹಿಳೆಯರು ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಿಲ್ಲ. ಕೃಷಿಯಲ್ಲಿ ದುಡಿಯುವ ಪುರುಷರಿಗೂ ಸಹಾಯ ಮಾಡುತ್ತೇವೆ ಎಂಬ ಗಟ್ಟಿಯಾದ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದಕ್ಕಾಗಿಯೇ ಈ ರ‍್ಯಾಲಿಯಲ್ಲಿ ನಾವು ಟ್ರ್ಯಾಕ್ಟರ್‌ಗಳನ್ನು ಚಾಲನೆ ಮಾಡುತ್ತಿದ್ದೇವೆ‘ ಎಂದು ಹೇಳಿದರು.

ಹರಿಯಾಣದ ಯಮುನಾ ನಗರದ ರೈತ ಆದಿತ್ಯ ಪಜೆಟ್ಟಾ, ಹೆಗಲ ಮೇಲೆ 15 ಕೆ.ಜಿ ತೂಗದ ನೇಗಿಲನ್ನು ಹೊತ್ತುಕೊಂಡು ಸಿಂಘು ಗಡಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ‘ಈ ನೇಗಿಲನ್ನು ರಕ್ಷಿಸುವುದು ನಮ್ಮ ಹೋರಾಟದ ಉದ್ದೇಶ. ತಲೆಮಾರುಗಳಿಂದ ನಮ್ಮ ಕುಟುಂಬ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಈ ಪರಂಪರೆಯನ್ನು ರಕ್ಷಿಸದಿದ್ದರೆ, ಖಂಡಿತಾ ನಶಿಸಿ ಹೋಗುತ್ತದೆ. ಈ ಸಂದೇಶ ಸಾರುವುದಕ್ಕಾಗಿ ನಾನು ಸಿಂಘು ಗಡಿಯಿಂದ ಈ ನೇಗಿಲನ್ನು ಹೊತ್ತು ಕೊಂಡೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೇನೆ. ರ‍್ಯಾಲಿ ಪೂರ್ಣಗೊಳ್ಳುವ ಸ್ಥಳದವರೆಗೂ ಈ ನೇಗಿಲನ್ನು ಕೊಂಡೊಯ್ಯುತ್ತೇನೆ‘ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT