ಛತ್ತೀಸ್‌ಗಡ: ನಕ್ಸಲ್ ಪೀಡಿತ ಪ್ರದೇಶದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ದಂತೇವಾಡಾ: ಛತ್ತೀಸ್‌ಗಡದಲ್ಲಿ ನಕ್ಸಲ್ ಪೀಡಿತ ದಂತೇವಾಡಾ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ತುಂಬಿದ್ದ ಗೂಡ್ಸ್ ರೈಲಿನ 17 ಬೋಗಿಗಳು ಹಳಿ ತಪ್ಪಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಕಿರಾಂದುಲ್-ವಿಶಾಖಪಟ್ಟಣ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ಕಬ್ಬಿಣದ ಅದಿರು ತುಂಬಿದ ರೈಲು ಕಿರಾಂದುಲ್ (ದಂತೇವಾಡಾ)ದಿಂದ ವಿಶಾಖಪಟ್ಟಣಕ್ಕೆ ಚಲಿಸುತ್ತಿದ್ದಾಗ ಭನ್ಸ್ ಮತ್ತು ಕಮಲೂರ್ ನಿಲ್ದಾಣಗಳ ನಡುವೆ ಮುಂಜಾನೆ 4.05ರ ವೇಳೆಗೆ ಘಟನೆ ನಡೆದಿದೆ ಎಂದು ದಂತೇವಾಡಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ರೈಲು ಹಳ್ಳಿ ತಪ್ಪಿದ ಪರಿಣಾಮ ಜಗದಲಪುರ ಮತ್ತು ಕಿರಾಂದುಲ್ ನಡುವೆ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ ಮಾವೋವಾದಿಗಳ ಕೈವಾಡ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಪ್ರಾಥಮಿಕ ತನಿಖೆಯಲ್ಲಿ ಯಾಂತ್ರಿಕ ದೋಷಗಳಿಂದಾಗಿ ಘಟನೆ ಸಂಭವಿಸಿರಬಹುದು ಎಂದು ವಿವರಣೆ ನೀಡಿದ್ದಾರೆ.
ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸ್ಥಳಕ್ಕೆ ಭೇಟಿ ನೀಡಿದ್ದು, ರೈಲು ಹಳಿ ದುರಸ್ತಿಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.