ಕಾಶ್ಮೀರದಲ್ಲಿ ಹಿಮಪಾತ: 30 ನಾಗರಿಕರ ರಕ್ಷಿಸಿದ ಸೇನೆ

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಘ್ದಾರ್–ಚೌಕಿಬಲ್ ಹೆದ್ದಾರಿಯಲ್ಲಿ ಮಂಗಳವಾರ ಉಂಟಾದ ಅವಳಿ ಹಿಮಪಾತದಲ್ಲಿ ಮಗು ಸೇರಿ 30 ನಾಗರಿಕರು ಸಿಲುಕಿದ್ದು, ಎಲ್ಲರನ್ನೂ ಭಾರತೀಯ ಸೇನೆ ರಕ್ಷಿಸಿದೆ.
ತಂಘ್ದಾರ್–ಚೌಕಿಬಲ್ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ಈ ಅವಘಡ ಸಂಭವಿಸಿದ್ದು, 14 ನಾಗರಿಕರನ್ನು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.
‘ಹೆದ್ದಾರಿಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧ ಪ್ರಯಾಣಕರಿರುವ ವಾಹನಗಳು ಹಿಮಕುಸಿತದಡಿ ಸಿಲುಕಿರುವ ಮಾಹಿತಿ ಪಡೆದು ತಕ್ಷಣವೇ ಕಾರ್ಯಪ್ರವೃತ್ತರಾದ ಕ್ಯಾಪ್ಟನ್ ಕುಲ್ಜೋತ್ ಸಿಂಗ್ ನೇತೃತ್ವದ ರಕ್ಷಣಾ ತಂಡವು, 30 ಮಂದಿಯನ್ನು ರಕ್ಷಿಸಿದೆ. ಹಿಮಕುಸಿತದಡಿ ಸಿಲುಕಿದ್ದ ಹೃದ್ರೋಗಿಯೊಬ್ಬರು ಅಸ್ವಸ್ಥಗೊಂಡಿದ್ದರು’ ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಸಿಲುಕಿದ್ದ ನಾಗರಿಕರೆಲ್ಲರನ್ನೂ ಹತ್ತಿರದ ಸೇನಾ ಶಿಬಿರಕ್ಕೆ ಕರೆದೊಯ್ದು ಬಿಸಿಯೂಟವನ್ನು ನೀಡಿ, ನಂತರ ಅವರೆಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ಹಿಮಪಾತದ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರವನ್ನು ಬಂದ್ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.