ಬುಧವಾರ, ಸೆಪ್ಟೆಂಬರ್ 22, 2021
23 °C

ಹಿಮಾಚಲ ಪ್ರದೇಶ, ಜಮ್ಮು, ಲಡಾಖ್‌ನಲ್ಲಿ ಅವಘಡ: ಮೇಘಸ್ಫೋಟಕ್ಕೆ 16 ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ/ಜಮ್ಮು: ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಬುಧವಾರ ಸಂಭವಿಸಿದ ಸರಣಿ ಮೇಘಸ್ಫೋಟ ಪ್ರಕರಣಗಳಲ್ಲಿ ಒಟ್ಟು 16 ಜನರು ಮೃತಪಟ್ಟಿದ್ದಾರೆ. ಹಲವಾರು ಮನೆಗಳು, ಬೆಳೆದ ಪೈರು, ವಿದ್ಯುತ್ ಘಟಕಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥದ ಪಸಿದ್ಧ ಗುಹಾದೇಗುಲದ ಬಳಿ ಬುಧವಾರ ಮೇಘಸ್ಫೋಟ ಸಂಭವಿಸಿದರೂ, ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಶ್ತ್‌ವಾರ್‌ನ ಕುಗ್ರಾಮವೊಂದರಲ್ಲಿ ಮುಂಜಾನೆ 4:30ರ ಸುಮಾರಿಗೆ ಮೇಘಸ್ಫೋಟ ಉಂಟಾಗಿ, 7 ಜನರು ಸಾವನ್ನಪ್ಪಿದರು. 17 ಮಂದಿ ಗಾಯಗೊಂಡರು. ದಿಢೀರ್ ಪ್ರವಾಹದಲ್ಲಿ ಏಳು ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಳೆಯ ದಡದಲ್ಲಿದ್ದ 19 ಮನೆಗಳು, 21 ದನದ ಕೊಟ್ಟಿಗೆಗಳು, ಪಡಿತರ ಡಿಪೋಗಳು ಮೇಘಸ್ಫೋಟದಲ್ಲಿ ಹಾನಿಗೀಡಾಗಿವೆ. 

17 ಮಂದಿಯನ್ನು ರಕ್ಷಿಸಲಾಗಿದೆ. ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಪತ್ತೆಯಾದ 14 ಜನರನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿದೆ. 

ಲಡಾಖ್‌ನ ಕಾರ್ಗಿಲ್‌ ವಲಯದಲ್ಲಿ ಮೇಘಸ್ಫೋಟದ ಎರಡು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಕಿರು ವಿದ್ಯುತ್ ಘಟಕಗಳು, 10ಕ್ಕೂ ಹೆಚ್ಚು ಮನೆಗಳು ಮತ್ತು ಬೆಳೆದು ನಿಂತಿದ್ದ ಫಸಲು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಹಿಮಾಚಲ ಪ್ರದೇಶದ ಉದಯಪುರದ ಟೋಜಿಂಗ್ ನುಲ್ಲಾದಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಏಳು ಜನರು ಸಾವನ್ನಪ್ಪಿ, ಇಬ್ಬರು ಗಾಯಗೊಂಡು, ಮೂವರು ಕಾಣೆಯಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದ ಪ್ರವಾಹದಲ್ಲಿ 12  ಕಾರ್ಮಿಕರ ಸಹಿತ ಎರಡು ಟೆಂಟ್, ಜೆಸಿಬಿ ಯಂತ್ರ ಕೊಚ್ಚಿ ಹೋಗಿವೆ.

ಕೇಂದ್ರ ಸರ್ಕಾರ ನಿಗಾ

ಕಿಶ್ತ್‌ವಾರ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಪ್ರದೇಶಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದ್ದು, ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರೊಂದಿಗೆ ಮಾತನಾಡಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಪರಿಹಾರ ಕಾರ್ಯಕ್ಕೆ ಹವಾಮಾನ ಅಡ್ಡಿ

ಕಿಶ್ತ್‌ವಾರ್‌ನಿಂದ ಒಂದು ಎಸ್‌ಡಿಆರ್‌ಎಫ್ ತಂಡವು ಕುಗ್ರಾಮವನ್ನು ತಲುಪಿದೆ. ದೋಡಾ ಮತ್ತು ಉಧಂಪುರ್ ಜಿಲ್ಲೆಗಳಿಂದ ಇನ್ನೂ ಎರಡು ತಂಡಗಳು ರಕ್ಷಣೆಗೆ ತೆರಳುತ್ತಿವೆ. ವಿಮಾನ ಸಂಚಾರಕ್ಕೆ ಸೂಕ್ತ ಹವಾಮಾನ ಒದಗಿದಲ್ಲಿ, ಜಮ್ಮು ಮತ್ತು ಶ್ರೀನಗರದಿಂದ ಇನ್ನೂ ಎರಡು ತಂಡಗಳು ತೆರಳಲಿವೆ. ಪಂಜಾಬ್‌ನ ಲೂಧಿಯಾನದಿಂದ ಎನ್‌ಡಿಆರ್‌ಎಫ್ ತಂಡವೊಂದು ಕಿಶ್ತ್‌ವಾರ್‌ಗೆ ತೆರಳುವ ಮಾರ್ಗದಲ್ಲಿದೆ.

‘ಹವಾಮಾನ ವೈಪರೀತ್ಯದ ಕಾರಣ ನಮ್ಮ ತಂಡಗಳು ವಿಮಾನ ನಿಲ್ದಾಣಗಳಲ್ಲಿ ಕಾಯುತ್ತಿವೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ರಸ್ತೆ ಸಂಪರ್ಕದಿಂದ ಕಾಲ್ನಡಿಗೆಯಲ್ಲಿ ಮೂರು ಗಂಟೆಗಳ ಪ್ರಯಾಣದ ಬಳಿಕ ಕುಗ್ರಾಮ ಸಿಗಲಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸೇನಾ ಸಿಬ್ಬಂದಿ ಕೈಜೋಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು