ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಪೂರೈಕೆ: 2–3 ದಿನದಲ್ಲಿ ಸಹಜ ಸ್ಥಿತಿಗೆ?

Last Updated 5 ಅಕ್ಟೋಬರ್ 2021, 18:40 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಮುಂದಿನ 2–3 ದಿನಗಳಲ್ಲಿ ಕಲ್ಲಿದ್ದಲು ದಾಸ್ತಾನು ಪ್ರಮಾಣವು ಏರಿಕೆಯಾಗುತ್ತ ಹೋಗಲಿದೆ ಎಂದು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದಾದ್ಯಂತ ವಿವಿಧೆಡೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಕಾಡುತ್ತಿರುವಂತೆಯೇ ಈ ಹೇಳಿಕೆ ಹೊರಬಿದ್ದಿದೆ. ‘ಸೋಮವಾರದಿಂದ ಪರಿಸ್ಥಿತಿ ಸುಧಾರಿಸುತ್ತಿದೆ. 2–3 ದಿನದಲ್ಲಿ ಸರಿಹೋಗಲಿದೆ. ದಾಸ್ತಾನು ಪ್ರಮಾಣ ಏರಿಕೆಯಾಗಲಿದೆ’ ಎಂದು ಹೇಳಿದರು.

ಕೋಲ್ ಇಂಡಿಯಾ (ಸಿಐಎಲ್‌) ಅಧಿಕಾರಿಯೊಬ್ಬರ ಪ್ರಕಾರ, ಸದ್ಯ ವಿವಿಧ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ನಿತ್ಯ 1.4 ಮಿಲಿಯನ್‌ ಟನ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಇದನ್ನು ಹೆಚ್ಚಿಸಲಿದ್ದು, ಕೆಲವೇ ದಿನಗಳಲ್ಲಿ ಈ ಪ್ರಮಾಣ 1.5 ಮಿಲಿಯನ್‌ಗೆ ಏರಿಕೆಯಾಗಲಿದೆ.

ಕೋಲ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ದೇಶೀಯವಾಗಿ ಶೇ 80ರಷ್ಟು ಪ್ರಮಾಣದಷ್ಟು ಕಲ್ಲಿದ್ದಲು ಪೂರೈಸಲಿದೆ. ಅಲ್ಲದೆ, ವಿದ್ಯುತ್‌ ಸ್ಥಾವರಗಳು ಕಳೆದ ಅಕ್ಟೋಬರ್ ತಿಂಗಳಿನಿಂದ ಇದೇ ವರ್ಷದ ಫೆಬ್ರುವರಿ ತಿಂಗಳವರೆಗೂ ಕಲ್ಲಿದ್ದಲು ಎತ್ತುವರಿ ಮಾಡಿಲ್ಲ. ಉಷ್ಣ ವಿದ್ಯುತ್‌ ಸ್ಥಾವರಗಳು ತಮ್ಮಲ್ಲಿದ್ದ ದಾಸ್ತಾನನ್ನೇ ಬಳಕೆ ಮಾಡುತ್ತಿದ್ದವು. 22 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು ಎಂಬ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುತ್ತಿರಲಿಲ್ಲ. ವಿದ್ಯುತ್‌ಗೆ ಬೇಡಿಕೆ ಹೆಚ್ಚಿದಂತೆ, ಕಲ್ಲಿದ್ದಲ್ಲಿಗೂ ಬೇಡಿಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಒಮ್ಮೆ ಪರಿಸ್ಥಿತಿ ಕೈಮೀರಲು ಆರಂಭಿಸಿದಂತೆ ಉಷ್ಣ ವಿದ್ಯುತ್ ಸ್ಥಾವರಗಳು ಕೋಲ್‌ ಇಂಡಿಯಾ ಸಂಸ್ಥೆಯತ್ತ ಬೆರಳು ತೋರಿಸುತ್ತಿವೆ ಎಂದು ಅಧಿಕಾರಿ ತಿಳಿಸಿದರು. ಸಂಸ್ಥೆಯು ಬೇಡಿಕೆಗೆ ಸ್ಪಂದಿಸಲು ಯತ್ನಿಸುತ್ತಿದೆ. ಇದಕ್ಕೆ ಕಾಲಾವಕಾಶಬೇಕು ಎಂದು ಹೇಳಿದರು.

ಸಿಐಎಲ್ ನಿರ್ದೇಶಕ (ಮಾರುಕಟ್ಟೆ) ಎಸ್.ಎನ್‌.ತಿವಾರಿ ಅವರು, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಹೆಚ್ಚಿಸುವ ಹೊಣೆ ಸಂಸ್ಥೆಯದು. ನಾವು ಸಹಜ ಸ್ಥಿತಿಗೆ ತರಲು ಯತ್ನಿಸುತ್ತಿದ್ದೇವೆ. ಸದ್ಯ, ಪೂರೈಕೆಗಿಂತಲೂ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ವಾಸ್ತವವಾಗಿ ಹಣಕಾಸು ವರ್ಷದ ಪ್ರಥಮಾರ್ಧದಲ್ಲಿ ಸಿಐಎಲ್‌ ಸುಮಾರು 246 ಮಿಲಿಯನ್ ಟನ್‌ ಅಷ್ಟು ಪೂರೈಸಿದೆ. ಈ ವಲಯದಿಂದ ಬೇಡಿಕೆಯೂ ಹೆಚ್ಚಿತ್ತು. ದೇಶೀಯ ಅಗತ್ಯ ಪೂರೈಸಲು ಹೆಚ್ಚುವರಿ 10–12 ಮಿಲಿಯನ್ ಟನ್‌ ಪೂರೈಸಬೇಕಾದ ಹೊಣೆ ಇತ್ತು. ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದ ಕಂಪನಿಗಳು, ಅಲ್ಲಿ ದರ ಏರಿದ್ದರಿಂದ ದೇಶಿಯವಾಗಿ ಬೇಡಿಕೆ ಹೆಚ್ಚಿಸಿದ್ದವು.

ಪ್ರಸ್ತುತ, ಸುಮಾರು 64 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ನಾಲ್ಕು ದಿನಗಳಿಗೂ ಕಡಿಮೆ ಆಗುವಷ್ಟು ಕಲ್ಲಿದ್ದಲು ದಾಸ್ತಾನಿದೆ. ಸಿಇಎಯು 135 ಸ್ಥಾವರಗಳಲ್ಲಿ ಇರುವ ದಾಸ್ತಾನು ಪರಿಶೀಲಿಸುತ್ತಿದೆ. ಇವುಗಳ ಒಟ್ಟಾರೆ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ನಿತ್ಯ 165 ಗಿಗಾವ್ಯಾಟ್ ಆಗಿದೆ.

ಒಟ್ಟಾರೆಯಾಗಿ 135 ಸ್ಥಾವರಗಳಲ್ಲಿ 78,09,200 ಟನ್‌ ಕಲ್ಲಿದ್ದಲು (ಅಕ್ಟೋಬರ್ 3) ದಾಸ್ತಾನು ಇದ್ದು, ನಾಲ್ಕು ದಿನಗಳ ಅವಧಿಗೆ ಇದು ಸಾಕು. ಈ ಸ್ಥಾವರಗಳ ಒಟ್ಟು ಉತ್ಪಾದನಾ ಸಾಮರ್ಥ್ಯ 165 ಗಿಗಾವ್ಯಾಟ್ ಆಗಿದ್ದು, ನಿತ್ಯದ ಕಲ್ಲಿದ್ದಲಿನ ಬೇಡಿಕೆ 18,24,100 ಟನ್‌. ಇವುಗಳ ಪೈಕಿ ಒಂದರಲ್ಲೂ 8 ದಿನಕ್ಕಿಂತಲೂ ಹೆಚ್ಚಿನ ಅವಧಿಗೆ ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT