ಶನಿವಾರ, ಆಗಸ್ಟ್ 13, 2022
28 °C
ಇಡುಕ್ಕಿ ಜಿಲ್ಲೆಯ ವಟ್ಟವಡು ಗ್ರಾಮ ಪಂಚಾಯಿತಿಯ ವಿನೂತನ ಪ್ರಯೋಗ

ಕೇರಳ: ಜಾತಿ ನಿರ್ಮೂಲನೆಗಾಗಿ ಸಮುದಾಯ ಕ್ಷೌರಿಕ ಅಂಗಡಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ಇಡುಕ್ಕಿ ಜಿಲ್ಲೆಯ ಗ್ರಾಮವೊಂದರ ಕ್ಷೌರದಂಗಡಿಗಳಲ್ಲಿ ದಶಕಗಳಿಂದ ನಡೆಯುತ್ತಿದ್ದ ಜಾತಿ ತಾರತಮ್ಯ ನಿರ್ಮೂಲನೆಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಸಮುದಾಯ ಕ್ಷೌರದಂಗಡಿಯನ್ನು ಆರಂಭಿಸಲು ನಿರ್ಧರಿಸಿದೆ.

ಮುನ್ನಾರ್‌ನಿಂದ 40 ಕಿ.ಮೀ. ದೂರವಿರುವ ಇಡುಕ್ಕಿ ಜಿಲ್ಲೆಯ ವಟ್ಟವಡ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚಕ್ಲಿಯಾ ಸಮುದಾಯದ ಸುಮಾರು 700 ಮಂದಿ ದಶಕಗಳಿಂದ ಕ್ಷೌರದಂಗಡಿಗಳಲ್ಲಿ ಜಾತಿ ತಾರತಮ್ಯ ಅನುಭವಿಸುತ್ತಿದ್ದರು. ಅಷ್ಟೇ ಅಲ್ಲ, ಈ ಮಂದಿಗೆ ಸ್ಥಳೀಯ ಹೋಟೆಲ್‌ಗಳಲ್ಲಿ ಚಹಾವನ್ನು ತೆಂಗಿನ ಚಿಪ್ಪುಗಳಲ್ಲಿ ನೀಡಲಾಗುತ್ತಿತ್ತು.

ಕ್ಷೌರದಂಗಡಿಗಳಲ್ಲಿ ನಡೆಯುತ್ತಿದ್ದ ಜಾತಿ ತಾರತಮ್ಯ ಕುರಿತು ಪರಿಶಿಷ್ಟ ಜಾತಿಯ ಕೆಲ ಯುವಕರು ವಟ್ಟವಡ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದರು. ಇದಕ್ಕೆ ವಿವಿಧೆಡೆ ಬೆಂಬಲ ದೊರೆಯುತ್ತಿದ್ದಂತೆ, ವಟ್ಟವಡ ಗ್ರಾಮ ಪಂಚಾಯ್ತಿ ಜಾತಿ ತಾರತಮ್ಯ ಮಾಡುತ್ತಿದ್ದ ಎರಡು ಕ್ಷೌರದಂಗಡಿಗಳಿಗೆ ನೋಟಿಸ್ ನೀಡಿ ಮುಚ್ಚಿಸಿತು. ಅಷ್ಟೇ ಅಲ್ಲ, ಗ್ರಾಮ ಪಂಚಾಯಿತಿಯೇ ಎಲ್ಲಾ ಜಾತಿಯವರಿಗೆ ಸಮುದಾಯ ಕ್ಷೌರದಂಗಡಿ ತೆರೆಯಲು ನಿರ್ಧರಿಸಿತು.

ಕ್ಷೌರಕ್ಕಾಗಿ 40 ಕಿ.ಮೀ. ದೂರ ಪ್ರಯಾಣ

‘ವಟ್ಟವಡದಲ್ಲಿ ಚಕ್ಲಿಯಾ ಸಮುದಾಯದ ಜನರು ಕೂದಲು ಕತ್ತರಿಸಿಕೊಳ್ಳಲು ಕ್ಷೌರದಂಗಡಿಗಳಿಗೆ ಬಂದರೆ, ಇತರ ಜಾತಿಯ ಜನರು ಈ ಅಂಗಡಿಗಳಿಗೆ ಬರಲು ಒಪ್ಪುತ್ತಿರಲಿಲ್ಲ. ಹಾಗಾಗಿ, ಕ್ಷೌರದಂಗಡಿಗಳ ಮಾಲೀಕರು ಚಕ್ಲಿಯಾ ಸಮುದಾಯದ ಜನರಿಗೆ ಕೂದಲು ಕತ್ತರಿಸಲು ನಿರಾಕರಿಸುತ್ತಿದ್ದರು. ಈ ಸಮುದಾಯದ ಜನರು ತಲೆಕೂದಲು ಕತ್ತರಿಸಿಕೊಳ್ಳುವ ಸಲುವಾಗಿ ವಟ್ಟವಡದಿಂದ 40 ಕಿ.ಮೀ. ದೂರವಿರುವ ಮುನ್ನಾರ್‌ಗೆ ಹೋಗಬೇಕಿತ್ತು. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂದಲು ಕತ್ತರಿಸಿಕೊಳ್ಳಬೇಕೆಂದರೆ ಶಾಲೆಗೆ ಒಂದು ದಿನ ರಜೆ ಕೂಡ ಹಾಕಬೇಕಿತ್ತು ಎಂದು ರಾಜ್ಯಸಭಾ ಸದಸ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಗಳ ಸಂಸದೀಯ ಸ್ಥಾಯಿಸಮಿತಿಯ ಸದಸ್ಯರೂ ಆಗಿರುವ ಕೆ. ಸೋಮಪ್ರಸಾದ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸಿಪಿಎಂ ಆಡಳಿತವಿರುವ ಗ್ರಾಮ ಪಂಚಾಯ್ತಿಯು ವಟ್ಟವಡದಲ್ಲಿ ಎಲ್ಲಾ ಜಾತಿಯ ಜನರಿಗಾಗಿ ಕ್ಷೌರದಂಗಡಿ ತೆರೆಯಲು ಮುಂದಾಗಿದೆ. ತಮ್ಮ ಅಂಗಡಿಗಳಲ್ಲಿ ಚಕ್ಲಿಯಾ ಜಾತಿಯ ಜನರಿಗೂ ಕ್ಷೌರ ಮಾಡುವುದಿದ್ದರೆ ಮಾತ್ರ ಮಾಲೀಕರಿಗೆ ಕ್ಷೌರದಂಗಡಿ ತೆರೆಯಲು ಅವಕಾಶ ನೀಡಲಾಗುವುದು’ ಎಂದು ವಟ್ಟವಡ ಗ್ರಾಮಪಂಚಾಯ್ತಿಯ ಅಧ್ಯಕ್ಷ ರಾಮ್‌ರಾಜ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು