ಶುಕ್ರವಾರ, ಜುಲೈ 30, 2021
22 °C

ಮಕ್ಕಳಿಗೆ ಅನುಕಂಪ ಆಧಾರಿತ ನೌಕರಿ :ತಿರಸ್ಕರಿಸಲು ಕಾಂಗ್ರೆಸ್‌ ಶಾಸಕರಿಗೆ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ (ಪಿಟಿಐ): ಇಬ್ಬರು ಶಾಸಕರ ಮಕ್ಕಳಿಗೆ ‘ಅನುಕಂಪದ ಕೋಟಾ’ದಲ್ಲಿ ಸರ್ಕಾರಿ ನೌಕರಿ ನೀಡಲಾಗಿದೆ ಎಂಬುದು ಪಂಜಾಬ್‌ನ ಕಾಂಗ್ರೆಸ್ ಪಕ್ಷದಲ್ಲಿ ವಿವಾದಕ್ಕೆ ಆಸ್ಪದವಾದ ಹಿಂದೆಯೇ ಸಂಸದ ಪ್ರತಾಪ್‌ ಸಿಂಗ್ ಬಜ್ವಾ, ‘ಮಕ್ಕಳಿಗೆ ನೀಡಲಾದ ಸರ್ಕಾರಿ ನೌಕರಿಯನ್ನು ತಿರಸ್ಕರಿಸಬೇಕು’ ಎಂದು ಶಾಸಕರಿಗೆ ಒತ್ತಾಯಿಸಿದ್ದಾರೆ.

ಪಕ್ಷದ ಶಾಸಕರಾದ ಫತೇಜಂಗ್ ಸಿಂಗ್ ಬಜ್ವಾ ಮತ್ತು ರಾಕೇಶ್‌ ಪಾಂಡೆ ಅವರಿಗೆ ಈ ಮನವಿ ಮಾಡಲಾಗಿದೆ. ಕ್ರಮವಾಗಿ ಇವರ ಮಕ್ಕಳಾದ ಅರ್ಜುನ್‌ ಪ್ರತಾಪ್ ಸಿಂಗ್ ಬಜ್ವಾ ಮತ್ತು ಭೀಷಂ ಪಾಂಡೆ ಅವರಿಗೆ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ತಹಶೀಲ್ದಾರ್ ಹುದ್ದೆಯನ್ನು ‘ಅನುಕಂಪದ ಆಧಾರ’ದಲ್ಲಿ ಪಂಜಾಬ್‌ ಸರ್ಕಾರ ನೀಡಿತ್ತು.

ಅರ್ಜುನ್‌ ಬಜ್ವಾ ಅವರು ಮಾಜಿ ಸಚಿವ ಸತ್ನಂ ಸಿಂಗ್ ಬಜ್ವಾ ಅವರ ಮೊಮ್ಮಗ. ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರದ ಪ್ರಕಾರ, ಸತ್ನಂ ಸಿಂಗ್ ಅವರು1987ರಲ್ಲಿ ರಾಜ್ಯದ ಶಾಂತಿ, ಸೌಹಾರ್ದಕ್ಕಾಗಿ ಜೀವತ್ಯಾಗ ಮಾಡಿದ್ದರು. ಅಂತೆಯೇ, ಭೀಷಂ ಪಾಂಡೆ ಅವರು ಮಾಜಿ ಸಚಿವ ಜೋಗಿಂದರ್ ಪಾಲ್‌ ಪಾಂಡೆ ಅವರ ಮೊಮ್ಮಗ. ಇವರು 1987ರಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು.

‘ಸತ್ನಂ ಸಿಂಗ್ ಬಜ್ವಾ ಮತ್ತು ಜೋಗಿಂದರ್ ಪಾಲ್‌ ಪಾಂಡೆ ಇಬ್ಬರೂ ಸಮೂಹದ ನಾಯಕರು. ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ದೇಶದ ಸೌಹಾರ್ದಕ್ಕಾಗಿ ತಮ್ಮ ಜೀವತ್ಯಾಗ ಮಾಡಿದ್ದಾರೆ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್‌ ಸಿಂಗ್ ಬಜ್ವಾ ಇದೇ ಸಂದರ್ಭದಲ್ಲಿ ಸ್ಮರಿಸಿದರು.

‘ಈ ಇಬ್ಬರ ವ್ಯಕ್ತಿತ್ವವನ್ನು ಗೌರವಿಸುತ್ತಲೇ, ಶಾಸಕರಾದ ಫತೇಜಂಗ್ ಸಿಂಗ್ ಬಜ್ವಾ ಮತ್ತು ರಾಕೇಶ್‌ ಪಾಂಡೆ ಅವರಿಗೆ ತಮ್ಮ ಪುತ್ರರಿಗೆ ಪಂಜಾಬ್ ಸರ್ಕಾರ ಸಚಿವ ಸಂಪುಟ ಅನುಕಂಪದ ಆಧಾರದಲ್ಲಿ ಮಕ್ಕಳಿಗೆ ನೀಡಿರುವ ನೌಕರಿ ತಿರಸ್ಕರಿಸಬೇಕು ಎಂದು ಕೋರುತ್ತೇನೆ’ ಎಂದು ಪ್ರತಾಪ್‌ ಸಿಂಗ್ ಬಜ್ವಾ ಕೋರಿದರು.

ಇನ್ನೊಂದೆಡೆ, ಇಬ್ಬರು ಶಾಸಕರ ಮಕ್ಕಳಿಗೆ ಸರ್ಕಾರಿ ನೌಕರಿ ನೀಡಿರುವ ಕ್ರಮವನ್ನು ಪಂಜಾಬ್‌ನ ಒಂಬತ್ತು ಸಚಿವರು ಮತ್ತು ಪಕ್ಷದ ನಾಲ್ವರು ಸಂಸದರು ಭಾನುವಾರ ಬಲವಾಗಿ ಸಮರ್ಥಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು