ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ 15–18 ವರ್ಷ ವಯಸ್ಸಿನ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಕೋವಿಡ್ ಲಸಿಕೆ

Last Updated 3 ಜನವರಿ 2022, 17:00 IST
ಅಕ್ಷರ ಗಾತ್ರ

ನವದೆಹಲಿ: ಹದಿಹರೆಯದ ಲಕ್ಷಾಂತರ ಮಕ್ಕಳು ಕೋವಿಡ್‌–19 ತಡೆ ಲಸಿಕೆಗಾಗಿ ಸರತಿ ಸಾಲಲ್ಲಿ ನಿಂತಿದ್ದ ದೃಶ್ಯಗಳು ದೇಶದ ವಿವಿಧ ಭಾಗಗಳಲ್ಲಿ ಸೋಮವಾರ ಕಂಡು ಬಂತು. 15–18ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಿಕೆ ಸೋಮವಾರದಿಂದ ಆರಂಭವಾಗಿದೆ.ಸೋಮವಾರ ರಾತ್ರಿ 8 ಗಂಟೆಯಹೊತ್ತಿಗೆ ಸುಮಾರು 40 ಲಕ್ಷ ಮಕ್ಕಳು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಟ್ವೀಟ್‌ ಮಾಡಿದ್ದಾರೆ. 15–18ರ ವಯೋಮಾನದ ಒಟ್ಟು 7.4 ಕೋಟಿ ಮಕ್ಕಳು ದೇಶದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ.

ಲಸಿಕಾ ಕೇಂದ್ರಗಳಲ್ಲಿ ಆಕರ್ಷಕವಾದ ಸೆಲ್ಫಿ ತಾಣಗಳನ್ನು ರೂಪಿಸಲಾಗಿತ್ತು. ಚಂದದ ಪೋಸ್ಟರ್‌ಗಳು ಮತ್ತು ವರ್ಣಮಯ ಬಲೂನ್‌ಗಳನ್ನು ಇರಿಸಲಾಗಿತ್ತು. ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಯುವ ಜನರನ್ನು ಸ್ವಾಗತಿಸಲು ಆಲಂಕಾರಗೊಂಡು ಸಜ್ಜಾಗಿದ್ದವು. ಕೆಲವು ಮಕ್ಕಳು ಶಾಲಾ ಸಮವಸ್ತ್ರದಲ್ಲಿಯೇ ಬಂದರೆ, ಇನ್ನುಳಿದವರು ತಮ್ಮ ಆಯ್ಕೆಯ ಬಟ್ಟೆ ಧರಿಸಿ ಬಂದಿದ್ದರು. ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಕೆಲವೆಡೆ ಉಡುಗೊರೆಗಳನ್ನೂ ನೀಡಲಾಗಿದೆ.

ಲಸಿಕೆಗೆ ನೋಂದಣಿ ಪ್ರಕ್ರಿಯೆ ಶನಿವಾರವೇ ಆರಂಭವಾಗಿತ್ತು. ನೋಂದಣಿ ಮಾಡಿಸದೆ ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋದವರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಇದೆ.

ಲಸಿಕಾ ಅಭಿಯಾನವು ಕಳೆದ ವರ್ಷದ ಜನವರಿ 16ರಂದು ಆರಂಭವಾಗಿತ್ತು. ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ಮುಂಚೂಣಿ ಹೋರಾಟಗಾರರು, ಹಿರಿಯ ನಾಗರಿಕರಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ನಂತರ, ಅದನ್ನು 18 ವರ್ಷ ದಾಟಿದ ಎಲ್ಲರಿಗೂ ವಿಸ್ತರಿಸಲಾಗಿತ್ತು.

ಹೆಚ್ಚಿನ ಶಾಲೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿಯೇ ಲಸಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳು ಮತ್ತು ಹೆತ್ತವರಿಂದ ಲಸಿಕೆ ಅಭಿಯಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಶಾಲೆ ಮತ್ತು ಕಾಲೇಜುಗಳ ಪ್ರಾಂಶುಪಾಲರು ಹೇಳಿದ್ದಾರೆ.

‘ಸಾಂಕ್ರಾಮಿಕದ ನಡುವೆಯೇ ಶಾಲೆಗಳು ತೆರೆದಾಗ ಮಗನನ್ನು ಕಳುಹಿಸಲು ಹಿಂಜರಿಕೆ ಇತ್ತು. ಈಗ, ಅವನಿಗೂ ಲಸಿಕೆ ಸಿಕ್ಕಿದ್ದರಿಂದ ನಿರಾಳವಾಗಿದೆ’ ಎಂದು ಸವಿತಾ ದೇವಿ ಎಂಬವರು ಹೇಳಿದ್ದಾರೆ. ಅವರ ಮಗ ದೆಹಲಿಯ ಸರ್ಕಾರಿ ಶಾಲೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾನೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಹಲವು ನಿರ್ಬಂಧಗಳು ಇವೆ. ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕೆ ವಿವಿಧ ಚಟುವಟಿಕೆಗಳಿಂದ ವಂಚಿತರಾಗುವುದು ಇಷ್ಟವಿಲ್ಲ ಎಂದು ಹಲವು ವಿದ್ಯಾರ್ಥಿಗಳು ಹೇಳಿದ್ದಾರೆ.

ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ತೀವ್ರವಾಗಿ ಹರಡುವ ಭೀತಿ ಇರುವುದರಿಂದ 15–18ರವಯಸ್ಸಿನವರಲ್ಲಿ ಲಸಿಕೆ ಹಾಕಿಸಿಕೊಳ್ಳುವ ಹುರುಪು ಹೆಚ್ಚು ಕಾಣಿಸಿಕೊಂಡಿದೆ.

1,700ಓಮೈಕ್ರಾನ್‌ ಪ್ರಕರಣಗಳು:ಸೋಮವಾರ ಬೆಳಿಗ್ಗೆ 8ರವರೆಗೆ ದೇಶದಾದ್ಯಂತ ಒಟ್ಟು 1,700 ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರದಲ್ಲಿ 510, ದೆಹಲಿಯಲ್ಲಿ 351, ಕೇರಳದಲ್ಲಿ 156, ಗುಜರಾತ್‌ನಲ್ಲಿ 136, ತಮಿಳುನಾಡಿನಲ್ಲಿ 121 ಮತ್ತು ರಾಜಸ್ಥಾನದಲ್ಲಿ 120 ಓಮೈಕ್ರಾನ್‌ ಪ್ರಕರಣಗಳು ದಾಖಲಾಗಿವೆ.

ಅವಧಿ ಮುಗಿದ ಲಸಿಕೆ ಬಾಟಲಿಗೆ ಹೊಸ ಲೇಬಲ್?: ಭಾರತ್ ಬಯೊಟೆಕ್‌ ತನ್ನ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ನ, ಅವಧಿ ಮುಗಿದ ಬಾಟಲ್‌ಗಳಿಗೆ ಹೊಸ ಲೇಬಲ್ ಹಾಕಿ ಪೂರೈಕೆ ಮಾಡುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟನೆ ನೀಡಿದೆ.

‘ಅವಧಿ ಮುಗಿದ ಕೋವ್ಯಾಕ್ಸಿನ್‌ ಲಸಿಕೆಗಳನ್ನು ಪೂರೈಕೆ ಮಾಡುತ್ತಿಲ್ಲ. ತಯಾರಿಕೆಯ ದಿನದಿಂದ 9 ತಿಂಗಳು ಮೊದಲು ಈ ಲಸಿಕೆಯನ್ನು ಬಳಸಬೇಕಿತ್ತು. ಈ ಅವಧಿಯನ್ನು 12 ತಿಂಗಳಿಗೆ ವಿಸ್ತರಿಸುವಂತೆ ಕಂಪನಿಯು ಪತ್ರ ಬರೆದಿತ್ತು. ಆ ಪ್ರಕಾರ ಅವಧಿಯನ್ನು ವಿಸ್ತರಿಸಲಾಗಿದೆ. ದೀರ್ಘಾವಧಿಯಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಂಪನಿಯು, ತನ್ನ ಬಳಿ ಇರುವ ಬಾಟಲಿಗಳ ಲೇಬಲ್‌ಗಳನ್ನು ಬದಲಿಸಿ, ಪೂರೈಕೆ ಮಾಡುತ್ತಿದೆ. ಒಂಬತ್ತು ತಿಂಗಳು ಎಂದು ಇದ್ದ ಅವಧಿಯನ್ನು 12 ತಿಂಗಳು ಎಂದು ಬದಲಿಸಲಾಗಿದೆ ಅಷ್ಟೆ’ ಎಂದು ಆರೋಗ್ಯ ಸಚಿವಾಲಯವು ಸ್ಪಷ್ಟನೆ ನೀಡಿದೆ.

ಕೋವ್ಯಾಕ್ಸಿನ್‌ ಬಳಕೆಗೆ ಅನುಮತಿ ದೊರೆತಾಗ, ಅದರ ಅವಧಿ ಗರಿಷ್ಠ 6 ತಿಂಗಳು ಆಗಿತ್ತು. 2021ರ ಫೆಬ್ರುವರಿಯಲ್ಲಿ ಅದನ್ನು 9 ತಿಂಗಳಿಗೆ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT