ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಸೋಂಕಿತರಿಗೆ ಯುವ ಕಾಂಗ್ರೆಸ್‌ ನೆರವು

ರಾಷ್ಟ್ರಮಟ್ಟದಲ್ಲಿ ಶ್ರಮಿಸುತ್ತಿರುವ ಕನ್ನಡಿಗ ಬಿ.ವಿ. ಶ್ರೀನಿವಾಸ್
Last Updated 16 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ತುರ್ತು ಚಿಕಿತ್ಸೆ ಸೇರಿದಂತೆ ವಿವಿಧ ಸೌಲಭ್ಯ ದೊರೆಯದೆ ಸಂಕಷ್ಟ ಎದುರಿಸುತ್ತಿರುವ ಕೊರೊನಾ ಸೋಂಕಿತರಿಗೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಹಾಯಹಸ್ತ ಚಾಚಿದ್ದಾರೆ.

ದೇಶದ ಯಾವುದೇ ಭಾಗದಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯ ಸಹಿತ ಹಾಸಿಗೆ, ರೆಮ್‌ಡಿಸೀವಿರ್‌ ಇಂಜಕ್ಷನ್‌, ಪ್ಲಾಸ್ಮಾ ದೊರೆಯದೆ ಪರದಾಡುತ್ತಿರುವ ರೋಗಿಗಳಿಗೆ ನೆರವಾಗಲು ಸಾವಿರಾರು ಜನ ಯುವ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ಇಲ್ಲಿನ ರೈಸಿನಾ ರಸ್ತೆಯಲ್ಲಿರುವ ಕಾಂಗ್ರೆಸ್‌ ಯುವ ಘಟಕದ ರಾಷ್ಟ್ರೀಯ ಕಚೇರಿಯಲ್ಲಿ ಈ ಸಂಬಂಧ ‘ಸಹಾಯವಾಣಿ’ ಕೇಂದ್ರ ಆರಂಭಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಸಹಾಯ ಕೋರುವವರನ್ನು ತಕ್ಷಣ ಸಂಪರ್ಕಿಸಿ ನೆರವು ನೀಡಲೆಂದೇ ಏಳೆಂಟು ಜನ ಕಾರ್ಯಕರ್ತರು ದಿನವಿಡೀ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಮಾನವೀಯ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಮಚ್ಚುಗೆಯೂ ವ್ಯಕ್ತವಾಗಿದೆ.

ಲಾಕ್‌ಡೌನ್‌ನಿಂದ ಕಳೆದ ವರ್ಷ ಸಮಸ್ಯೆಗೆ ಒಳಗಾದ ವಲಸೆ ಕಾರ್ಮಿಕರಿಗೆ ಊಟ–ತಿಂಡಿ, ವಾಹನ ವ್ಯವಸ್ಥೆ ಕಲ್ಪಿಸುವ ಮಾನವೀಯ ಕಾರ್ಯಕ್ಕೆ ಚಾಲನೆ ನೀಡಿದ್ದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ, ಕನ್ನಡಿಗ ಬಿ.ವಿ. ಶ್ರೀನಿವಾಸ್‌, ಇದೀಗ ಕೋವಿಡ್‌ ಮಹಾಮಾರಿಗೆ ನಲುಗಿರುವವರ ನೆರವಿಗಾಗಿ ಕಾರ್ಯಕರ್ತರ ಪಡೆಯನ್ನು ಸನ್ನದ್ಧಗೊಳಿಸಿದ್ದಾರೆ.

10 ದಿನಗಳ ಹಿಂದೆ ಆರಂಭಿಸಲಾದ ‘ಸಹಾಯವಾಣಿ’ ಕೇಂದ್ರದ ಮೂಲಕ ದೇಶದಾದ್ಯಂತ 12ಸಾವಿರಕ್ಕೂ ಅಧಿಕ ರೋಗಿಗಳಿಗೆ ಸಹಾಯ ಒದಗಿಸಲಾಗಿದೆ. ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೂ ಪರದಾಡುತ್ತಿರುವ ಕುಟುಂಬ ಸದಸ್ಯರ ನೆರವಿಗೂ ಧಾವಿಸಲಾಗಿದೆ.

‘ಕೊರೊನಾದ ದ್ವಿತೀಯ ಅಲೆ ಆರಂಭವಾಗಿದ್ದೇ ತಡ, ದೇಶದ ವಿವಿಧ ಭಾಗಗಳ 40 ಸಾವಿರಕ್ಕೂ ಅಧಿಕ ಜನ ಸಾಮಾಜಿಕ ಜಾಲತಾಣ ಮತ್ತು ಫೋನ್‌ ಕರೆಯ ಮೂಲಕ ಸಹಾಯ ಕೋರಿದ್ದಾರೆ. ಆ ಪೈಕಿ 12 ಸಾವಿರಕ್ಕೂ ಅಧಿಕ ಜನರ ಸಂಕಷ್ಟದಲ್ಲಿ ಭಾಗಿಯಾಗಿದ್ದೇವೆ’ ಎಂದು ಭದ್ರಾವತಿ ಮೂಲದ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಂಕು ಹರಡುತ್ತಿರುವುದರಿಂದ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಹಾಸಿಗೆ ಸೌಲಭ್ಯ ಇಲ್ಲದೆ, ಆಂಬುಲೆನ್ಸ್‌ ಸಿಗದೆ ಪರದಾಡುವ ರೋಗಿಗಳು ನೆರವಿಗಾಗಿ ಮನವಿ ಸಲ್ಲಿಸುತ್ತಿದ್ದಾರೆ. ಸಮೀಪದ ಅಥವಾ ಪಕ್ಕದೂರಿನ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲು ನಮ್ಮ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಅನಕ್ಷರಸ್ಥರಿಗೆ ಲಸಿಕೆ ಹಾಕಿಸಿಕೊಳ್ಳಲೂ ನೆರವಾಗುತ್ತಿದ್ದೇವೆ. ಪ್ಲಾಸ್ಮಾ ದಾನ ಮಾಡುವುದರಿಂದ ಸಮಸ್ಯೆ ಇಲ್ಲ ಎಂದು ಈಗಾಗಲೇ ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖ ಆದವರಿಗೆ ಮನವರಿಕೆ ಮಾಡಿ ಅಗತ್ಯ ಇರುವವರಿಗೆ ನೆರವಾಗುವಂತೆ ಮಾಡಿದ್ದೇವೆ’ ಎಂದು ಅವರು ವಿವರಿಸಿದರು.

ಒಂದು ವರ್ಷದಿಂದ ವಲಸೆ ಕಾರ್ಮಿಕರಿಗೆ, ಬಡ ಜನತೆಗೆ ಎಲ್ಲ ರೀತಿಯಲ್ಲೂ ಸಹಾಯ ಒದಗಿಸಲಾಗಿದೆ. ಈಗಲೂ ದೇಶದಾದ್ಯಂತ ಯಾವುದೇ ಭಾಗದಲ್ಲಾಗಲಿ, ರೋಗಿಗಳು ಸಹಾಯ ಕೋರಿ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಸಂಪರ್ಕಿಸಿದಲ್ಲಿ ತಕ್ಷಣ ಅವರ ನೆರವಿಗೆ ಧಾವಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT