ಶನಿವಾರ, ಸೆಪ್ಟೆಂಬರ್ 18, 2021
30 °C

ಕೋವಿಡ್‌-19: ಕೇರಳದ ವಿರುದ್ಧ ಯೋಜಿತ ಅಭಿಯಾನ ನಡೆಯುತ್ತಿದೆ ಎಂದ ಆರೋಗ್ಯ ಸಚಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೋವಿಡ್‌ ವಿಚಾರದಲ್ಲಿ ಕೇರಳದ ವಿರುದ್ಧ ಯೋಜಿತ ಅಭಿಯಾನ ನಡೆಯುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಆರೋಪಿಸಿದ್ದಾರೆ.

ಸುದ್ದಿಸಂಸ್ಥೆ 'ಎಎನ್‌ಐ' ಜೊತೆ ಗುರುವಾರ ಮಾತನಾಡಿರುವ ಅವರು, 'ಕೇರಳದ ವಿರುದ್ಧ ಯೋಜಿತ ಅಭಿಯಾನ ನಡೆಯುತ್ತಿದೆ. ನಮ್ಮಲ್ಲಿ ಉತ್ತಮ ರಕ್ಷಣಾ ಕಾರ್ಯವಿಧಾನವಿದೆ ಎಂದು ವಿವಿಧ ರಾಜ್ಯಗಳ ತಜ್ಞರು ಹೇಳಿದ್ದಾರೆ. ಕೇರಳದ ಶೇ 42 ಜನರು ಪ್ರತಿಕಾಯಗಳನ್ನು ಹೊಂದಿದ್ದಾರೆಂದು ಐಸಿಎಂಆರ್ ನಡೆಸಿದ ಸಿರೊಪ್ರೆವೆಲೆನ್ಸ್ ಅಧ್ಯಯನದಿಂದ ತಿಳಿದುಬಂದಿದೆ. ಕೋವಿಡ್‌ ತಡೆಗಟ್ಟುವ ಕಾರ್ಯವಿಧಾನವೂ ನಮ್ಮಲ್ಲಿ ಉತ್ತಮವಾಗಿದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ' ಎಂದು ಹೇಳಿಕೆ ನೀಡಿದ್ದಾರೆ.

'ಕೇರಳದ ಒಟ್ಟು ಜನಸಂಖ್ಯೆಯ ಶೇ 50 ಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲಿಲ್ಲ. ಈ ಸಮಯದಲ್ಲಿ ಸೋಂಕು ಹರಡುತ್ತಿರುವ ಡೆಲ್ಟಾ ವೈರಸ್ ಹೆಚ್ಚು ಅಪಾಯಕಾರಿಯಾಗಿದೆ. ಅದನ್ನು ತಡೆಗಟ್ಟಲು ನಾವು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ' ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

'ನಾವು ಗರಿಷ್ಠ ಕೋವಿಡ್‌ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ನಿನ್ನೆ(ಬುಧವಾರ) ನಾವು 1.96 ಲಕ್ಷ ಪರೀಕ್ಷೆಗಳನ್ನು ನಡೆಸಿದ್ದೇವೆ. ಇಂದು ನಾವು 1.63 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿದ್ದೇವೆ. ಪ್ರತಿಯೊಂದು ಪೊಸಿಟಿವ್‌ ಪ್ರಕರಣಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ಕೇರಳದ ಆರೋಗ್ಯ ಸಚಿವೆ ಹೇಳಿದ್ದಾರೆ.

‘ಕೇರಳದಲ್ಲಿ ಈಗಲೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎನ್‌ಸಿಡಿಸಿ ನಿರ್ದೇಶಕರ ನೇತೃತ್ವದ 6 ಸದಸ್ಯರ ತಂಡವನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರಕ್ಕೆ ಕೇಂದ್ರ ತಂಡ ನೆರವು ನೀಡಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ ಟ್ವೀಟ್ ಮಾಡಿದ್ದರು.

ಕೇರಳದಲ್ಲಿ ಸದ್ಯ, 1.54 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ದೇಶದ ಸಕ್ರಿಯ ಪ್ರಕರಣಗಳ ಪೈಕಿ ಶೇ. 37.1 ರಷ್ಟಿದೆ.

ರಾಜ್ಯದಲ್ಲಿ ದಿನನಿತ್ಯದ ಸರಾಸರಿ ಪ್ರಕರಣಗಳು 17,443 ಕ್ಕಿಂತ ಹೆಚ್ಚಿವೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯ ಶೇಕಡಾ 12.93 ರಷ್ಟು ಮತ್ತು ವಾರಕ್ಕೆ 11.97 ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು