ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಕೇರಳದಲ್ಲಿ ಗರಿಷ್ಠ ಪ್ರಕರಣ

Last Updated 12 ಅಕ್ಟೋಬರ್ 2020, 7:56 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಭಾನುವಾರ 11,755 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ದಿನದ ಗರಿಷ್ಠ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯವು ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಮೀರಿಸಿದೆ.

ರಾಜ್ಯದಲ್ಲಿ ಮೇ 8ರಂದು ಕೋವಿಡ್‌–19ರ ಮೊದಲ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ, ಸೋಂಕು ನಿಯಂತ್ರಣದ ವಿಚಾರದಲ್ಲಿ ಐದು ತಿಂಗಳಲ್ಲಿ ರಾಜ್ಯದ ಲೆಕ್ಕಾಚಾರಗಳು ತಲೆಕೆಳಗಾಗಿವೆ.

‘ಸೆಪ್ಟೆಂಬರ್‌ ತಿಂಗಳ ನಂತರ ಪ್ರಕರಣಗಳು ಹೆಚ್ಚಿವೆ. ಅಕ್ಟೋಬರ್‌– ನವೆಂಬರ್‌ ತಿಂಗಳುಗಳು ನಮಗೆ ನಿರ್ಣಾಯಕವಾಗಿವೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶನಿವಾರ ಹೇಳಿದ್ದಾರೆ.

ಕೋವಿಡ್‌ ಸೋಂಕಿತರ ಒಟ್ಟಾರೆ ಸಂಖ್ಯಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಶನಿವಾರ 11,416 ಹಾಗೂ ಕರ್ನಾಟಕದಲ್ಲಿ 10,517 ಹೊಸ ಪ್ರಕರಣಗಳು ದಾಖಲಾಗಿದ್ದವು.

ಆಗಸ್ಟ್‌– ಸೆಪ್ಟೆಂಬರ್‌ ತಿಂಗಳಲ್ಲಿ ಸೋಂಕು ಉತ್ತುಂಗಕ್ಕೆ ಏರಲಿದ್ದು, ಪ್ರತಿದಿನ 10 ಸಾವಿರದಿಂದ 20 ಸಾವಿರ ಮಂದಿ ಸೋಂಕಿಗೆ ಒಳಗಾಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದರು. ಈಗಿನ ಬೆಳವಣಿಗೆಯು ಅದಕ್ಕೆ ಅನುಗುಣವಾಗಿದೆ. ತಜ್ಞರು ನೀಡಿರುವ ಆರೋಗ್ಯ ಸಲಹೆಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ದೇಶದ ಮೊದಲ ಕೋವಿಡ್‌–19 ಪ್ರಕರಣವು ಜನವರಿ 30ರಂದು ಕೇರಳದಲ್ಲಿ ದಾಖಲಾಗಿತ್ತು. ಚೀನಾದ ವುಹಾನ್‌ನಿಂದ ರಾಜ್ಯಕ್ಕೆ ಮರಳಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರಲ್ಲಿ ಸೋಂಕು ಕಾಣಿಸಿತ್ತು. ದೇಶದ ಎರಡು ಮತ್ತು ಮೂರನೇ ಸೋಂಕಿತರೂ ವುಹಾನ್‌ನಿಂದ ಬಂದವರೇ ಆಗಿದ್ದರು.

ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಕೇರಳದಲ್ಲಿ 499 ಪ್ರಕರಣಗಳು ದಾಖಲಾಗಿದ್ದವು. ಲಾಕ್‌ಡೌನ್‌ ಘೋಷಣೆಯಾದ ನಂತರ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಮೇ 3ರವರೆಗೂ ರಾಜ್ಯದಲ್ಲಿ ಹೊಸ ಪ್ರಕರಣ ದಾಖಲಾಗಿರಲಿಲ್ಲ. ‘ಕೋವಿಡ್‌ ಗ್ರಾಫ್‌ ಮೇಲೇರದಂತೆ ನೋಡಿಕೊಂಡ ನಮ್ಮತ್ತ ಇಡೀ ಜಗತ್ತು ದೃಷ್ಟಿ ಹರಿಸಿದೆ. ಇದನ್ನು ಸಾಧಿಸಲು ಹೇಗೆ ಸಾಧ್ಯವಾಯಿತು ಎಂದು ನಮ್ಮನ್ನು ಜಗತ್ತೇ ಕೇಳುತ್ತಿದೆ’ ಎಂದು ಆಗ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಆಗ ಹೇಳಿದ್ದರು.

ಆದರೆ, ಮೇ 4ರ ನಂತರ ಲಾಕ್‌ಡೌನ್‌ ಸಡಿಲಿಸಿದ್ದರಿಂದ ರಾಜ್ಯದ ಚಿತ್ರಣ ಬದಲಾಯಿತು. ವಿದೇಶಗಳಿಂದ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಂದ ಜನರು ರಾಜ್ಯಕ್ಕೆ ಮರಳಲು ಆರಂಭಿಸಿದರು. ಈವರೆಗೆ ಸುಮಾರು 9 ಲಕ್ಷ ಮಂದಿ ರಾಜ್ಯಕ್ಕೆ ಮರಳಿದ್ದಾರೆ.

ಓಣಂ ಹಾಗೂ ರಾಜಕೀಯ ಪ್ರತಿಭಟನೆಗಳ ಸಂದರ್ಭದಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಮೀರಿ ಜನರು ಓಡಾಡಿದ್ದೇ ಪ್ರಕರಣಗಳು ಹೆಚ್ಚಲು ಕಾರಣ ಎಂದು ಸರ್ಕಾರ ಹೇಳಿದೆ. ಶನಿವಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 2,77,855 ಮಂದಿ ಸೋಂಕಿತರಾಗಿದ್ದು, 95,918 ಸಕ್ರಿಯ ಪ್ರಕರಣಗಳು ಇವೆ. 978 ಮಂದಿ ಪ್ರಾಣ ಬಿಟ್ಟಿದ್ದಾರೆ.

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯವು ಅಕ್ಟೋಬರ್‌ ಅಂತ್ಯದವರೆಗೆ ವಿವಿಧ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT