ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಡ್ಡೆಯಿಂದ ಅಪಾಯ: ಕೋವಿಡ್‌ ಬಗ್ಗೆ ಪ್ರಧಾನಿ ಮೋದಿ ಕಿವಿಮಾತು

ಲಾಕ್‌ಡೌನ್‌ ತೆರವಾಗಿದೆ, ವೈರಸ್‌ ಇನ್ನೂ ಇದೆ, ಎಚ್ಚರ: ಮೋದಿ
Last Updated 20 ಅಕ್ಟೋಬರ್ 2020, 20:27 IST
ಅಕ್ಷರ ಗಾತ್ರ

ನವದೆಹಲಿ : ಕೊರೊನಾ ಸೋಂಕು ಹರಡುವಿಕೆ ತಡೆಗೆ ಹೇರಲಾಗಿದ್ದ ಲಾಕ್‌ಡೌನ್‌ ಕೊನೆಯಾಗಿದೆ. ಆದರೆ, ವೈರಾಣು ಈಗಲೂ ಇಲ್ಲಿ ಇದೆ. ಹಾಗಾಗಿ ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದು ನಿರ್ಲಕ್ಷ್ಯಕ್ಕೆ ಕಾಲವಲ್ಲ, ಸಣ್ಣ ಅಸಡ್ಡೆ ಕೂಡ ಹಬ್ಬದ ಸಂಭ್ರಮಕ್ಕೆ ತಣ್ಣೀರು ಸುರಿಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ.

ಮಾಸ್ಕ್‌ ಧರಿಸುವುದು ಮತ್ತು ಇತರ ಮುನ್ನೆಚ್ಚರಿಕೆಗಳ ಬಗ್ಗೆ ಜನರು ನಿರ್ಲಕ್ಷ್ಯ ತೋರಿದ ವಿಡಿಯೊಗಳು ಮತ್ತು ಚಿತ್ರಗಳು ಇತ್ತೀಚೆಗೆ ಕಾಣಿಸಿಕೊಂಡಿವೆ. ಇದು ಖಂಡಿತಾ ಸರಿಯಲ್ಲ. ಅಸಡ್ಡೆ ತೋರುತ್ತಿರುವವರು ಮತ್ತು ಮಾಸ್ಕ್‌ ಧರಿಸದೆ ಅಡ್ಡಾಡುತ್ತಿರುವವರು ಮಕ್ಕಳು ಮತ್ತು ವೃದ್ಧರನ್ನು ಒಳಗೊಂಡ ತಮ್ಮ ಕುಟುಂಬವನ್ನೇ ಅಪಾಯಕ್ಕೆ ಒಡ್ಡುತ್ತಿದ್ದಾರೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್‌ ತೆರವು ಬಳಿಕ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿವೆ. ಜನರು ತಮ್ಮ ಕೆಲಸಗಳಿಗೆ ಮರಳಿದ್ದಾರೆ. ಹಬ್ಬಗಳ ಈ ಸಂದರ್ಭದಲ್ಲಿ ಜನರು ಮಾರುಕಟ್ಟೆಗಳಿಗೆ ಬರುತ್ತಿದ್ದಾರೆ ಎಂಬುದರತ್ತಲೂ ಅವರು ಗಮನ ಸೆಳೆದರು.

ಸಾಂಕ್ರಾಮಿಕದಿಂದ ಪೂರ್ಣವಾಗಿ ಹೊರಬರುವ ತನಕ ನಿರ್ಲಕ್ಷ್ಯ ಸಲ್ಲದುಎಂಬುದನ್ನು ಮನದಟ್ಟು ಮಾಡುವುದಕ್ಕಾಗಿ ಕಬೀರ್‌ರಂತಹ ಸಂತ ಕವಿಗಳನ್ನು ಮತ್ತು ತುಳಸೀದಾಸರ ರಾಮಚರಿತಮಾನಸದ ಸಾಲುಗಳನ್ನು ಉಲ್ಲೇಖಿಸಿದರು.

ಅಮೆರಿಕ, ಸ್ಪೇನ್‌, ಬ್ರೆಜಿಲ್‌ ಮತ್ತು ಬ್ರಿಟನ್‌ನಂತಹ ಸಂಪನ್ಮೂಲ ಸಮೃದ್ಧ ದೇಶಗಳಿಗೆ ಹೋಲಿಸಿದರೆ ಕೋವಿಡ್‌ನಿಂದ ಜನರನ್ನು ರಕ್ಷಿಸುವಲ್ಲಿ ಭಾರತಕ್ಕೆ ಯಶಸ್ಸು ಲಭಿಸಿದೆ. ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಪ್ರತಿ 10 ಲಕ್ಷ ಜನರಲ್ಲಿ 25 ಸಾವಿರ ಜನರಿಗೆ ಸೋಂಕು ತಗಲಿದೆ. ಆದರೆ ಭಾರತದಲ್ಲಿ ಈ ಸಂಖ್ಯೆ 5,500 ಮಾತ್ರ ಎಂದು ಪ್ರಧಾನಿ ವಿವರಿಸಿದರು.

ಕೈಮುಗಿದ ಪ್ರಧಾನಿ

ಮಾಸ್ಕ್‌ ಧರಿಸುವುದು, ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಮತ್ತು ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಭಾವನಾತ್ಮಕವಾಗಿ, ಕೈಗಳನ್ನು ಮುಗಿದು ಪ್ರಧಾನಿ ಕೋರಿದರು. ಎಲ್ಲರ ಕುಟುಂಬಗಳು ಸುರಕ್ಷಿತವಾಗಿ, ಸಂತೋಷದಿಂದ ಇರುವುದನ್ನು ಬಯಸುವುದಾಗಿ ಹೇಳಿದರು.

ಸೋಂಕು ಹರಡುವಿಕೆಯು ಒಮ್ಮೆ ಕಡಿಮೆಯಾಗಿ ಮತ್ತೆ ದಿಢೀರ್‌ ಹೆಚ್ಚಳವಾದ ಅಮೆರಿಕ ಮತ್ತು ಯುರೋಪ್‌ನ ಹಲವು ದೇಶಗಳ ಉದಾಹರಣೆಗಳನ್ನು ನೀಡಿ ಮೋದಿ ಅವರು ವಿವರಿಸಿದರು. ಪರಿಣಾಮಕಾರಿ ಔಷಧ ದೊರೆಯುವ ತನಕ ನಿರ್ಲಕ್ಷ್ಯಕ್ಕೆ ಅವಕಾಶವನ್ನೇ ನೀಡಬಾರದು ಎಂದು ವಿನಂತಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT