ಮಂಗಳವಾರ, ಏಪ್ರಿಲ್ 20, 2021
32 °C

ಕೋವಿಡ್‌ ಏರಿಕೆ ಆತಂಕ: ಕರ್ನಾಟಕ ಸೇರಿ 9 ರಾಜ್ಯಗಳಿಗೆ ಕೇಂದ್ರದ ತಂಡ ರವಾನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌-19 ಹೊಸ ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ 10 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ತಜ್ಞರ ತಂಡವನ್ನು ಕಳುಹಿಸಿದೆ. ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಟ್ಟದ ಮೂವರು ಅಧಿಕಾರಿಗಳು ಈ ತಂಡದಲ್ಲಿ ಇದ್ದಾರೆ. 

ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣಿಸಿಕೊಂಡಿರುವ →ಮಹಾರಾಷ್ಟ್ರ, ಕೇರಳ, ಛತ್ತೀಸಗಡ, ಮಧ್ಯಪ್ರದೇಶ, ಗುಜರಾತ್, ಪಂಜಾಬ್‌, ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಈ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

‘ಆಯಾ ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಆಗಲು ಏನು ಕಾರಣ ಎಂಬುದನ್ನು ಪತ್ತೆ ಮಾಡಲು ಈ ತಂಡಗಳು ಪ್ರಯತ್ನಿಸಲಿವೆ. ಆಯಾ ರಾಜ್ಯಗಳ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಗಳ ಜತೆಯಲ್ಲಿ ಈ ತಂಡಗಳು ಕೆಲಸ ಮಾಡಲಿವೆ. ಹೊಸ ಅಲೆಯಲ್ಲಿ ಕೋವಿಡ್‌-19 ಹರಡುವಿಕೆಯ ಸರಪಳಿಯನ್ನು ತುಂಡರಿಸುವುದು ಹೇಗೆ ಎಂಬ ಕಾರ್ಯಯೋಜನೆಯನ್ನು ರೂಪಿಸಲು ಈ ತಂಡಗಳು ಪ್ರಯತ್ನಿಸಲಿವೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ರಾಜ್ಯಗಳಿಗೆ ಪತ್ರ: ಕೋವಿಡ್‌ ನಿಯಂತ್ರಣ ಕಾರ್ಯಯೋಜನೆಯ ಅನುಷ್ಠಾನವನ್ನು ಕಡೆಗಣಿಸಿವೆ ಎನ್ನಲಾದ ರಾಜ್ಯಗಳಿಗೆ ಆರೋಗ್ಯ ಸಚಿವಾಲಯವು ಪತ್ರ ಬರೆದಿದೆ.

‘ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ರಾಜ್ಯಗಳಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಹೀಗೆ ಆದರೆ, ಕೋವಿಡ್‌ ಲಾಕ್‌ಡೌನ್‌ನಿಂದ ಸಾಧಿಸಿದ ನಿಯಂತ್ರಣ
ವನ್ನು ಕಳೆದುಕೊಳ್ಳಬೇಕಾಗುತ್ತದೆ. ಆರ್‌ಟಿ-ಪಿಸಿಆರ್‌ ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಬೇಕು. ಪತ್ತೆಯಾಗದೇ ಉಳಿದಿರುವ ಪ್ರಕರಣಗಳನ್ನು ಪತ್ತೆ ಮಾಡಬೇಕು’ ಎಂದು ಆರೋಗ್ಯ ಸಚಿವಾಲಯವು ಪತ್ರದಲ್ಲಿ ಸೂಚನೆ ನೀಡಿದೆ. ಮಹಾರಾಷ್ಟ್ರ, ಕೇರಳ, ಛತ್ತೀಸಗಡ, ಮಧ್ಯಪ್ರದೇಶ, ಗುಜರಾತ್, ಪಂಜಾಬ್ ಮತ್ತು ಜಮ್ಮು-ಕಾಶ್ಮೀರಕ್ಕೆ ಈ ಪತ್ರ ಬರೆಯಲಾಗಿದೆ.

60ರ ಮೇಲ್ಪಟ್ಟವರಿಗೆ ಮಾರ್ಚ್‌ 1ರಿಂದ ಲಸಿಕೆ

ಎರಡನೇ ಹಂತದ ಕೋವಿಡ್‌ ಲಸಿಕೆ ಕಾರ್ಯಕ್ರಮವು ಮಾರ್ಚ್‌ 1ರಿಂದ ಆರಂಭವಾಗಲಿದೆ. ಈ ಬಾರಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

* ಈ ಹಂತದಲ್ಲಿ 60 ವರ್ಷ ಮೇಲ್ಪಟ್ಟ 10 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದೆ

* 45 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಅಂದಾಜು 17 ಕೋಟಿ ಜನರಿಗೆ ಈ ಹಂತದಲ್ಲಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ

* ಈ ಹಂತದಲ್ಲಿ 10,000 ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ

*20,000 ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲಾಗುತ್ತದೆ. ಆದರೆ, ಇದಕ್ಕೆ ಶುಲ್ಕ ಪಾವತಿ ಮಾಡಬೇಕು

* ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು
ಶುಲ್ಕದ ಮೊತ್ತವನ್ನು ಒಂದೆರಡು ದಿನಗಳಲ್ಲಿ ಘೋಷಿಸಲಾಗುತ್ತದೆ

* ಯಾವೆಲ್ಲ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪ‍ಟ್ಟವರು ಲಸಿಕೆಗೆ ಅರ್ಹರು ಎಂಬುದನ್ನು ಮುಂದೆ ಪ್ರಕಟಿಸಲಾಗುವುದು

ರಾಜ್ಯಗಳಿಗೆ ಸೂಚನೆ

* ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ಜಿಲ್ಲೆಗಳತ್ತ ಹೆಚ್ಚು ಗಮನ ನೀಡಬೇಕು. ಅಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಬೇಕು

*ರ್‍ಯಾಪಿಡ್‌ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿರುವ, ಆದರೆ ಕೋವಿಡ್ ಲಕ್ಷಣಗಳಿರುವ ಎಲ್ಲರನ್ನೂ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು

*ಕೋವಿಡ್ ಪಾಸಿಟಿವ್ ಇರುವ ಎಲ್ಲರನ್ನೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಬೇಕು. ಅವರ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆಮಾಡಿ, ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು

*ಕೇಂದ್ರದ ತಜ್ಞರ ತಂಡಗಳು ಕ್ಷೇತ್ರಾಧ್ಯಯನ ನಡೆಸಲಿವೆ. ಈ ತಂಡಗಳಿಗೆ ಅಗತ್ಯ ಸಹಕಾರ ನೀಡಬೇಕು

*ಕೇಂದ್ರದ ತಜ್ಞರ ತಂಡಗಳು ತಮ್ಮ ಭೇಟಿಯ ಅಂತ್ಯದಲ್ಲಿ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಕಡ್ಡಾಯವಾಗಿ ಸಭೆ ನಡೆಸಲಿವೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು