ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಹತ್ಯೆ ಭಾಷಣ‘: ರಾಹುಲ್ ವಿರುದ್ಧದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ

Last Updated 20 ಸೆಪ್ಟೆಂಬರ್ 2021, 10:36 IST
ಅಕ್ಷರ ಗಾತ್ರ

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ 2014ರ ತಮ್ಮ ಭಾಷಣದ ಮುದ್ರಿತ ಪ್ರತಿಯಲ್ಲಿ, ಮಹಾತ್ಮ ಗಾಂಧಿಯವರ ಹತ್ಯೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಕಾರಣ ಎಂದು ಹೇಳಿದ್ದು, ಈ ಸಂಬಂಧ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಕೋರಿ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್ ಕುಂಟೆ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಈ ಪಕ್ರಣಕ್ಕೆ ಸಂಬಂಧಿಸಿದಂತೆ ಭಾಷಣದ ಪ್ರತಿಯನ್ನೇ ಸಾಕ್ಷ್ಯವಾಗಿ ಪರಿಗಣಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಭಿವಂಡಿ ಮ್ಯಾಜಿಸ್ಟ್ರೇಟ್‌ ಕೋರ್ಟ್ 2018ರ ಸೆಪ್ಟೆಂಬರ್‌ನಲ್ಲಿ ವಜಾಗೊಳಿಸಿತ್ತು. ನಂತರ ರಾಜೇಶ್ ಕುಂಟೆ 2019ರಲ್ಲಿಈ ಆದೇಶವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇವತಿ ಮೊಹಿತೆ ಡೆರೆ ಅವರ ನೇತೃತ್ವದ ಬಾಂಬೆ ಹೈಕೋರ್ಟ್‌ನ ಏಕ ಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿತು.

ಕುಂಟೆ ಅವರು ‘ಮಾ. 6, 2014ರಂದು ಸಲ್ಲಿಸಿದ್ದ ಅರ್ಜಿಯ ಪ್ರಕಾರ, ರಾಹುಲ್ ಗಾಂಧಿಯವರು ಭಿವಂಡಿಯಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ, ‘ಆರ್‌ಎಸ್‌ಎಸ್‌ನವರು ಮಹಾತ್ಮ ಗಾಂಧಿಯನ್ನು ಕೊಂದರು‘. ಎಂದು ಹೇಳಿದ್ದರು. ಈ ಸಮಯದಲ್ಲಿ ಭಿವಂಡಿ ಆರ್‌ಎಸ್‌ಎಸ್‌ನ ಕಾರ್ಯದರ್ಶಿಯಾಗಿದ್ದ ಕುಂಟೆ, ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದರಿಂದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ರಾಹುಲ್ ಗಾಂಧಿಯವರು ವಿಚಾರಣೆ ಎದುರಿಸುತ್ತಿದ್ದಾರೆ.

ರಾಹುಲ್ ಗಾಂಧಿಯವರು ವಿಚಾರಣೆ ವೇಳೆ, ‘ನಾನು ಭಾಷಣದಲ್ಲಿ ಸಾಂದರ್ಭಿಕವಾಗಿ ಈ ಮಾತನ್ನು ಹೇಳಿದೆ‘ ಎಂದು ತಿಳಿಸಿದ್ದರು. ಅಲ್ಲದೆ ತಮ್ಮ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು 2014ರ ಡಿಸೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ತಮ್ಮ ಭಾಷಣದ ಮುದ್ರಿತ ಪ್ರತಿಯನ್ನೂ ಸಲ್ಲಿಸಿದ್ದರು.

ಈ ಮನವಿಯಲ್ಲಿ ರಾಹುಲ್ ಗಾಂಧಿ ಅವರು, ಇತರ ವಿಷಯಗಳ ಜೊತೆಗೆ, ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೂಲಭೂತವಾಗಿ ಎರಡೂ ಒಂದೇ‘ ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದರು. ಹಾಗೆಯೇ, ಮಹಾತ್ಮ ಗಾಂಧಿ ಅವರ ಹತ್ಯೆಯ ಕುರಿತು ಬಿಜೆಪಿಯ ನಿಲುವಿನ ಬಗ್ಗೆ ಮಾತನಾಡಲು ಅವರು ಉದ್ದೇಶಿಸಿದ್ದರು. ಅಲ್ಲಿ ಬಿಜೆಪಿ ಬದಲಿಗೆ ಆರ್‌ಎಸ್‌ಎಸ್ ಎಂದು ಹೇಳಿದ್ದಾಗಿ, ನ್ಯಾಯಾಲಯಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT