ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ನೀತಿ ಪ್ರಕರಣ: ನಾಶಪಡಿಸಲಾಗಿದೆ ಎನ್ನಲಾದ ಮೊಬೈಲ್‌ಗಳನ್ನು ತೋರಿದ ಕವಿತಾ

Last Updated 21 ಮಾರ್ಚ್ 2023, 9:58 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಜಾರಿ ಸಂದರ್ಭದಲ್ಲಿ ಬಳಸಲಾಗಿದ್ದ ಮೊಬೈಲ್‌ಗಳನ್ನು ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ.ಕವಿತಾ ಅವರು ನಾಶ ಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿತ್ತು. ಆದರೆ, ಕವಿತಾ ತಾವು ಬಳಸಿದ್ದ ಹಳೆಯ ಮೊಬೈಲ್‌ಗಳನ್ನು ಮಂಗಳವಾರ ಮಾಧ್ಯಮದವರು ಹಾಗೂ ಬೆಂಬಲಿಗರೆದುರು ಪ್ರದರ್ಶಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಹಾಗೂ ಬಿಆರ್‌ಎಸ್‌ ಪಕ್ಷದ ಎಂಎಲ್‌ಸಿ ಕವಿತಾ, ದೆಹಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ.ಯ ಮೂರನೇ ಸುತ್ತಿನ ವಿಚಾರಣೆಗೆ ಇಂದು ಹಾಜರಾಗಿದ್ದಾರೆ. ಈ ವೇಳೆ ಅವರು ತಾವು ಬಳಸಿದ್ದ ಹಳೇ ಫೋನ್‌ಗಳನ್ನು ಪ್ರದರ್ಶಿಸಿದ್ದಾರೆ.

ಇ.ಡಿ ಅಧಿಕಾರಿಗಳನ್ನು ಉದ್ದೇಶಿಸಿ ಪ್ರತ್ಯೇಕವಾಗಿ ಕಾಗದ ಬರೆದ ಕವಿತಾ, ‘ನಾನು ಹಿಂದೆ ಬಳಸುತ್ತಿದ್ದ ಎಲ್ಲಾ ಮೊ‍ಬೈಲ್‌ಗಳನ್ನು ಇ.ಡಿಗೆ ಸಲ್ಲಿಸುತ್ತಿದ್ದೇನೆ. ಮೊಬೈಲ್ ಕುರಿತಾದ ತಪಾಸಣೆಯು ದುರುದ್ದೇಶದಿಂದ ಕೂಡಿದ್ದು ಖಾಸಗಿತನದ ಉಲ್ಲಂಘನೆಯಾಗಿದೆ‘ ಎಂದು ಬರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪೂರ್ವಗ್ರಹಗಳಿಲ್ಲದೆ ಮೊಬೈಲ್‌ ಸಲ್ಲಿಸುತ್ತಿದ್ದೇನೆ. ಅದರಲ್ಲೂ ಮಹಿಳೆಯರ ಮೊಬೈಲ್‌ ಮಾಹಿತಿ ಪರೀಕ್ಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

'ಇ.ಡಿ 2022 ನವೆಂಬರ್‌ನಲ್ಲೇ ಅಬಕಾರಿ ನೀತಿ ಹಗರಣದ ಪ್ರಕರಣ ಸಂಬಂಧ ಇತರ ಆರೋಪಿಗಳ ಮೇಲೂ ಮೊಬೈಲ್‌ ನಾಶಗೈದ ಆರೋಪವನ್ನು ಹೊರಿಸಿತ್ತು. ಇದರಿಂದ ತನಿಖೆಯ ಉದ್ದೇಶವನ್ನು ಪ್ರಶ್ನಿಸುವ ಅವಕಾಶ ನನಗಿದೆ’ ಎಂದು ಆಕ್ರೋಶ ವ್ಯಕ್ತ‍ಪಡಿಸಿದರು.

ಕವಿತಾ ಅವರನ್ನು ಸೋಮವಾರ 10 ಗಂಟೆಗೂ ಹೆಚ್ಚು ಸಮಯ ವಿಚಾರಣೆಗೊಳಪಿಡಿದ್ದ ಇ.ಡಿ ಇಂದು ಮತ್ತೆ ವಿಚಾರಣೆಗೆ ಕರೆದಿತ್ತು.

ಅಬಕಾರಿ ನೀತಿಯನ್ನು ದುರುಪಯೋಗಪಡಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಸಂಬಂಧ ಈಗಾಗಲೇ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT