ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ಪಂಡಿತರ ಕುಟುಂಬ ಕಾಶ್ಮೀರದಲ್ಲಿ ನೆಲೆಸುವಂತೆ ಮಾಡಿದ್ದೀರಿ: ಕೇಜ್ರಿವಾಲ್

Last Updated 26 ಮಾರ್ಚ್ 2022, 12:22 IST
ಅಕ್ಷರ ಗಾತ್ರ

ನವದೆಹಲಿ: 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರವನ್ನು ಯೂಟ್ಯೂಬ್‌ಗೆ ಅಪ್ಲೋಡ್‌ ಮಾಡಿ ಎಂದು ಪುನಃ ಸಲಹೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ''ಕಳೆದ 8 ವರ್ಷಗಳಲ್ಲಿ ಎಷ್ಟು ಪಂಡಿತರ ಕುಟುಂಬಗಳನ್ನು ಕಾಶ್ಮೀರದಲ್ಲಿ ಪುನಃ ನೆಲೆಸುವಂತೆ ಮಾಡಿದ್ದೀರಿ?'' ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದಿಂದ ಸಿಕ್ಕಿದ ಲಾಭವನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕೆ ಬಳಕೆ ಮಾಡಲಿ ಎಂದು ಇದೇ ವೇಳೆ ಕೇಜ್ರಿವಾಲ್‌ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ಬಿಜೆಪಿ ಕಾಶ್ಮೀರ ಪಂಡಿತರ ಹತ್ಯೆಯ ಹೆಸರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಮತ್ತೊಮ್ಮೆ ಬಲವಾಗಿ ಆರೋಪಿಸಿದರು.

''ಕಳೆದ 8 ವರ್ಷಗಳಲ್ಲಿ, ಕಣಿವೆ ರಾಜ್ಯ ತೊರೆದ ಪಂಡಿತರ ಒಂದಾದರೂ ಕುಟುಂಬವನ್ನು ಪುನಃ ಕಾಶ್ಮೀರದಲ್ಲಿ ನೆಲೆಸುವಂತೆ ಬಿಜೆಪಿ ಮಾಡಿದೆಯೇ?'' ಎಂದು ಕೇಜ್ರಿವಾಲ್‌ ಖಾರವಾಗಿ ಪ್ರಶ್ನಿಸಿದರು.

ಗುರುವಾರ ವಿಧಾನಸಭೆಯ ಬಜೆಟ್‌ ಅಧಿವೇಶನದಲ್ಲಿ ಮಾತನಾಡಿದ ಕೇಜ್ರಿವಾಲ್‌, ''ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರವನ್ನು ಯೂಟ್ಯೂಬ್‌ಗೆ ಅಪ್ಲೋಡ್‌ ಮಾಡಬೇಕು. ಸಿನಿಮಾದಿಂದ ಗಳಿಸಿದ ದುಡ್ಡನ್ನು ಪಂಡಿತರ ಕಲ್ಯಾಣಕ್ಕೆ ಬಳಸಬೇಕು'' ಎಂದು ಒತ್ತಾಯಿಸಿದ್ದರು.

'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಳಿದ ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್‌, ತೆರಿಗೆ ವಿನಾಯಿತಿ ಕೇಳುವುದಕ್ಕಿಂತ ಯೂಟ್ಯೂಬ್‌ಗೆ ಅಪ್ಲೋಡ್‌ ಮಾಡಿದರೆ ಎಲ್ಲರೂ ಉಚಿತವಾಗಿ ನೋಡುತ್ತಾರೆ ಎಂದು ತಿರುಗೇಟು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT