ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಾಮವಾಗಿ ತಾಯಿ ಹೆಸರು ಬಳಕೆ ಪ್ರತಿ ಮಗುವಿನ ಹಕ್ಕು; ದೆಹಲಿ ಹೈಕೋರ್ಟ್‌

Last Updated 6 ಆಗಸ್ಟ್ 2021, 14:38 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ ಪ್ರತಿ ಮಗುವಿಗೂ ತನ್ನ ಹೆಸರಿನ ಜೊತೆಗೆ ತಾಯಿಯ ಹೆಸರನ್ನು ಉಪನಾಮವನ್ನಾಗಿ ಬಳಸುವ ಹಕ್ಕು ಇದೆ. ಈ ಸಂಬಂಧ ಮಕ್ಕಳಿಗೆ ತಂದೆ ಯಾವುದೇ ಷರತ್ತು ವಿಧಿಸುವುದು ಸಲ್ಲದು’ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ದಾಖಲೆಗಳಲ್ಲಿ ಮಗಳ ಹೆಸರಿನ ಜೊತೆ ಉಪನಾಮವಾಗಿ ತಾಯಿ ಹೆಸರಿನ ಬದಲು ತನ್ನ ಹೆಸರು ಬಳಸಲು ನಿರ್ದೇಶಿಸಬೇಕು ಎಂದು ಕೋರಿ ಬಾಲಕಿಯ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ಈ ಮಾತು ಹೇಳಿತು.

ಆದರೆ, ಈ ಕುರಿತು ಯಾವುದೇ ನಿರ್ದೇಶನವನ್ನು ನೀಡಲು ನಿರಾಕರಿಸಿದ ನ್ಯಾಯಮೂರ್ತಿ ರೇಖಾ ಪಳ್ಳಿ ಅವರು, ‘ತನ್ನ ಹೆಸರನ್ನೇ ಉಪನಾಮವಾಗಿ ಬಳಸಬೇಕು ಎಂದು ತಂದೆ ತಾಕೀತು ಮಾಡಲಾಗದು. ತಾಯಿ ಹೆಸರನ್ನು ಇಟ್ಟುಕೊಳ್ಳುವುದರಿಂದ ಮಗಳಿಗೆ ಖುಷಿ ಆಗುವುದಾದರೆ ಅದರಿಂದ ನಿಮಗೇನು ಸಮಸ್ಯೆ’ ಎಂದು ಅರ್ಜಿದಾರರನ್ನು ಪ್ರಶ್ನಿಸಿದರು.

‘ತನ್ನ ಇಚ್ಛೆಗೆ ಅನುಗುಣವಾಗಿ ಪ್ರತಿ ಮಗುವಿಗೂ ತಂದೆ ಅಥವಾ ತಾಯಿಯ ಹೆಸರನ್ನು ಹೆಸರಿನ ಜೊತೆಗೆ ಉಪನಾಮವಾಗಿ ಬಳಸುವ ಹಕ್ಕು ಇದೆ’ ಎಂದೂ ಕೋರ್ಟ್‌ ಸ್ಪಷ್ಟ ಮಾತುಗಳಲ್ಲಿ ಹೇಳಿತು.

ಅರ್ಜಿದಾರರ ಪರವಾಗಿ ಹಾಜರಿದ್ದ ವಕೀಲರು, ‘ತಮ್ಮ ಕಕ್ಷಿದಾರರ ಮಗಳು ಇನ್ನೂ ಅಪ್ರಾಪ್ತೆ. ಇಂಥ ವಿಷಯಗಳಲ್ಲಿ ಸ್ವಯಂ ನಿರ್ಧರಿಸುವಷ್ಟು ಬೆಳೆದಿಲ್ಲ. ಪ್ರತ್ಯೇಕಗೊಂಡಿರುವ ಅರ್ಜಿದಾರರ ಪತ್ನಿ ಈಗ ಹೆಸರು ಬದಲಿಸಿದ್ದಾರೆ’ ಎಂದು ತಿಳಿಸಿದರು.

ಮಗಳ ಹೆಸರಿನಲ್ಲಿ, ಹೆಸರಿನ ಜೊತೆಗೆ ತಂದೆಯ ಉಪನಾಮವನ್ನೂ ಸೇರಿಸಿ ವಿಮಾ ಪಾಲಿಸಿ ಪಡೆಯಲಾಗಿದೆ. ಹೆಸರು ಬದಲಾವಣೆಯಿಂದಕ್ಲೇಮು ಮಂಡಿಸಲು ತೊಂದರೆಯಾಗಲಿದೆ ಎಂದು ಅವರು ತಮ್ಮ ವಾದವನ್ನು ಸಮರ್ಥಿಸಿಕೊಂಡರು.

ಆದರೆ, ಈ ವಾದವನ್ನು ಒಪ್ಪಿಕೊಳ್ಳದ ಕೋರ್ಟ್‌, ‘ಬಾಲಕಿಯ ತಂದೆ ಎಂದು ದಾಖಲೆಗಳಲ್ಲಿ ತನ್ನ ಹೆಸರು ನಮೂದಿಸಲು ಆಗುವಂತೆ ಅರ್ಜಿದಾರರು ಸಂಬಂಧಿತ ಶಾಲಾ ಆಡಳಿತಕ್ಕೆ ಅರ್ಜಿ ಸಲ್ಲಿಸಲು ಸ್ವತಂತ್ರರಿದ್ದಾರೆ’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT