ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಗೆ ಲಗ್ಗೆ: ದೇಶದ್ರೋಹ ಪ್ರಕರಣ, ರೈತ ಮುಖಂಡರ ವಿರುದ್ಧ ಲುಕ್‌ಔಟ್‌ ನೋಟಿಸ್‌

ಗಣರಾಜ್ಯೋತ್ಸವ ದಿನದ ದಾಂದಲೆ l ರೈತ ಮುಖಂಡರ ವಿರುದ್ಧ ಲುಕ್‌ಔಟ್‌ ನೋಟಿಸ್‌
Last Updated 28 ಜನವರಿ 2021, 18:48 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋತ್ಸವ ದಿನ ರೈತರು ನಡೆಸಿದ ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ದಾಂದಲೆಗೆ ಸಂಬಂಧಿಸಿ ದೇಶದ್ರೋಹ ಮತ್ತು ಭಯೋತ್ಪಾದನೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾ ಗಿದೆ.ನಟ ದೀಪ್‌ ಸಿಧು ಮತ್ತು ಸಾಮಾಜಿಕ ಕಾರ್ಯಕರ್ತ ಲಖಾ ಸಿಧಾನ ವಿರುದ್ಧ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಸಂಘಟನೆಗಳ ಮುಖಂಡರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸ ಲಾಗಿದೆ.ಎಫ್‌ಐಆರ್‌ನಲ್ಲಿ ಹೆಸರಿರುವ ಎಲ್ಲ ರೈತರು ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ಕೇಳಲು ಇದರಿಂದ ಅವಕಾಶವಾಗಿದೆ. ರೈತ ಮುಖಂಡರು ದೇಶ ತೊರೆಯಬಾರದು ಎಂದು ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದ ಹಿಂಸಾಚಾರದ ಬಳಿಕ ಸರಣಿ ಸಭೆಗಳನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಲಾ ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪೊಲೀಸರು ಈವರೆಗೆ 25 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಜತೆಗೆ ಮಾತುಕತೆಯಲ್ಲಿ ಭಾಗಿಯಾಗಿದ್ದ ರೈತ ಸಂಘಟನೆಗಳ 40 ನಾಯಕರ ಪೈಕಿರಾಕೇಶ್‌ ಟಿಕಾಯತ್‌, ಯೋಗೇಂದ್ರ ಯಾದವ್‌, ಮೇಧಾ ಪಾಟ್ಕರ್, ದರ್ಶನ್‌ ಪಾಲ್‌, ಗುರ್ನಾಮ್‌ ಸಿಂಗ್‌ ಚದುನಿ ಸೇರಿ 37 ಮಂದಿಯ ಹೆಸರು ಈ ಎಫ್‌ಐಆರ್‌ ಗಳಲ್ಲಿ ಇದೆ.

20 ಮುಖಂಡರಿಗೆ ನೋಟಿಸ್‌ ನೀಡಿರುವ ಪೊಲೀಸರು, ಹಿಂಸಾಚಾರಕ್ಕೆ ಸಂಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಏಕೆ ಕೈಗೊಳ್ಳಬಾರದು ಎಂದೂ ಪ್ರಶ್ನಿಸಿದ್ದಾರೆ.

ಆಸ್ಪತ್ರೆಗೆ ಶಾ ಭೇಟಿ:ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾಗಿದ್ದಾರೆ. ಸುಮಾರು 400 ಪೊಲೀಸರು ಗಾಯ ಗೊಂಡಿದ್ದಾರೆ. ಶಾ ಜತೆಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಮತ್ತು ದೆಹಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌. ಶ್ರೀವಾಸ್ತವ ಅವರೂ ಇದ್ದರು. ಗಾಯ ಗೊಂಡ ಪೊಲೀಸರ ಜತೆಗೆಶಾ ಅವರು ಮಾತನಾಡಿದರು. ಬಳಿಕ ವೈದ್ಯರಿಂದ ಅವರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದರು.

ವಿದೇಶಿ ಸಂಘಟನೆಯ ಕೈವಾಡ ಶಂಕೆ: ಮಂಗಳವಾರದ ಘಟನೆಯ ಹಿಂದೆ ವಿದೇಶದ ಯಾವುದಾದರೂ ಸಂಘಟನೆ ಅಥವಾ ವ್ಯಕ್ತಿಗಳ ಪಾತ್ರ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ದೆಹಲಿಯಲ್ಲಿ ಹಿಂಸಾಚಾರ ನಡೆಸಲು ವ್ಯವಸ್ಥಿತ ಸಂಚು ರೂಪಿಸಲಾಗಿತ್ತು. ಗಣರಾಜ್ಯೋತ್ಸವ ದಿನ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟು ಮಾಡುವುದು ಇದರ ಉದ್ದೇಶ ಎಂದೂ ಅಂದಾಜಿಸಲಾಗಿದೆ.

ಪೊಲೀಸರು ಯಾವುದೇ ಸಂಘಟನೆಯನ್ನು ಹೆಸರಿಸಿಲ್ಲ. ದಾರಿ ತಪ್ಪಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಖಾಲಿಸ್ತಾನಿ ಸಂಘಟನೆಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.

ವಿದೇಶಿ ಸಂಘಟನೆಯ ಕೈವಾಡ ಶಂಕೆ

ಮಂಗಳವಾರದ ಘಟನೆಯ ಹಿಂದೆ ವಿದೇಶದ ಯಾವುದಾದರೂ ಸಂಘಟನೆ ಅಥವಾ ವ್ಯಕ್ತಿಗಳ ಪಾತ್ರ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ದೆಹಲಿಯಲ್ಲಿ ಹಿಂಸಾಚಾರ ನಡೆಸಲು ವ್ಯವಸ್ಥಿತ ಸಂಚು ರೂಪಿಸಲಾಗಿತ್ತು. ಗಣರಾಜ್ಯೋತ್ಸವ ದಿನ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟು ಮಾಡುವುದು ಇದರ ಉದ್ದೇಶ ಎಂದೂ ಅಂದಾಜಿಸಲಾಗಿದೆ.

ಪೊಲೀಸರು ಯಾವುದೇ ಸಂಘಟನೆಯನ್ನು ಹೆಸರಿಸಿಲ್ಲ. ದಾರಿ ತಪ್ಪಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಖಾಲಿಸ್ತಾನಿ ಸಂಘಟನೆಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.

ಪ್ರತಿಭಟನಕಾರರ ತೆರವು ಯತ್ನ?

ಗಾಜಿಪುರ ಮತ್ತು ಸಿಂಘು ಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ‘ಪ್ರತಿಭಟನೆಯ ಸ್ಥಳದಲ್ಲಿ ಒದಗಿಸಲಾಗಿದ್ದ ಮೂಲಸೌಕರ್ಯ
ಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಪ್ರತಿಭಟನಕಾರರ ಜತೆ ಮಾತನಾಡಿ ಅವರನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಉತ್ತರ ‍ಪ್ರದೇಶ ಸರ್ಕಾರ ಹೇಳಿದೆ. ಒಂದು ವೇಳೆ ರೈತರು ಆದೇಶವನ್ನು ಪಾಲಿಸದೇ ಇದ್ದರೆ ಬಲ ಪ್ರಯೋಗಿಸಲೂ ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಬಾಗಪ‍ತ್‌ ಪ‍್ರತಿಭಟನೆ ತೆರವು

ಉತ್ತರ ಪ್ರದೇಶದ ಬಾಗಪತ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಡಿಸೆಂಬರ್‌ನಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆ ಕೊನೆಗೊಂಡಿದೆ. ಪೊಲೀಸರು ತಮ್ಮನ್ನು ಬಲವಂತವಾಗಿ ತೆರವು ಮಾಡಿದ್ದಾರೆ ಎಂದು ರೈತರು ದೂರಿದ್ದಾರೆ. ಬುಧವಾರ ರಾತ್ರಿ ಡೇರೆಗಳಿಗೆ ನುಗ್ಗಿದ ಪೊಲೀಸರು ಮಲಗಿದ್ದ ರೈತರ ಮೇಲೆ ಬಲ ಪ್ರಯೋಗಿಸಿ ಓಡಿಸಿದ್ದಾರೆ. ಪೊಲೀಸರು ಲಾಠಿ ಪ್ರಹಾರ ಮಾಡಿದ್ದಲ್ಲದೆ, ಡೇರೆಗಳನ್ನು ಕಿತ್ತೆಸೆದಿದ್ದಾರೆ. ಆಗ ಅಲ್ಲಿ 40ಕ್ಕೂ ಹೆಚ್ಚು ರೈತರು ಇದ್ದರು ಎಂದು ಅವರು ಹೇಳಿದ್ದಾರೆ. ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಪ್ರತಿಭಟನೆ ಮುಂದುವರಿದಿದೆ ಎಂದೂ ರೈತರು ತಿಳಿಸಿದ್ದಾರೆ.

ಆದರೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ. ರೈತರು ಬುಧವಾರ ರಾತ್ರಿಯೇ ತಮ್ಮ ಮನೆಗಳಿಗೆ ಮರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ–ಸಹರನ್‌ಪುರ ಹೆದ್ದಾರಿಯ ಕಾಮಗಾರಿಗೆ ಕೆಲವು ಅರಾಜಕ ಶಕ್ತಿಗಳಿಂದಾಗಿ ತೊಂದರೆ ಆಗುತ್ತಿದೆ ಎಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಂಜಯ್‌ ಮಿಶ್ರಾ ಅವರು ಪತ್ರ ಬರೆದಿದ್ದರು. ಈ ಪತ್ರದ ಆಧಾರದಲ್ಲಿ ಕ್ರಮ ಕೈಗೊಂಡು ಹೆದ್ದಾರಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರನ್ನು ತೆರವು ಮಾಡಲಾಗಿದೆ ಎಂದು ಸಹಾಯಕ ಜಿಲ್ಲಾಧಿಕಾರಿ ಅಮಿತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT