ದೆಹಲಿ: ಗಾಳಿ ಗುಣಮಟ್ಟ ‘ತೀರಾ ಕಳಪೆ’

ನವದೆಹಲಿ: ‘ಮೂರು ದಿನಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಭಾನುವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕೊಂಚ ಸುಧಾರಿಸಿದೆ. ಅತಿ ಹೆಚ್ಚು ಮಾಲಿನ್ಯ ವಿಭಾಗದಿಂದ ‘ಅತ್ಯಂತ ಕಳಪೆ’ ವಿಭಾಗಕ್ಕೆ ತಗ್ಗಿದೆ. ಕನಿಷ್ಠ ತಾಪಮಾನವು 17.5 ಡಿಗ್ರಿ ಸೆಲ್ಸಿಯಸ್‌ನಷ್ಟು ವರದಿಯಾಗಿದೆ’ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
‘ಗಾಳಿಯು ವೇಗವಾಗಿ ಬೀಸುತ್ತಿರುವುದರಿಂದ ಹಾಗೂ ಕಟಾವು ಮಾಡಿರುವ ಪೈರಿನ ಕೂಳೆ ಸುಡುವುದು ಕಡಿಮೆಯಾಗಿರುವುದರಿಂದ ವಾಯು ಗುಣಮಟ್ಟ ಸುಧಾರಣೆ ಕಂಡಿದೆ. ಭಾನುವಾರ ಸಂಜೆ 4 ಗಂಟೆ ವೇಳೆಗೆ ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 339ರಷ್ಟು ವರದಿಯಾಗಿದೆ’ ಎಂದು ಸಿಪಿಸಿಬಿ ಹೇಳಿದೆ.
‘ಪಂಜಾಬಿ ಬಾಗ್, ಲೋಧಿ ರಸ್ತೆ ಹಾಗೂ ದಿಲ್ಸಾದ್ ಗಾರ್ಡನ್‌ನಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಿಸಿದೆ. ಈ ಪ್ರದೇಶಗಳಲ್ಲಿ ಕ್ರಮವಾಗಿ 272, 278 ಹಾಗೂ 284 ಎಕ್ಯೂಐ ದಾಖಲಾಗಿದೆ. ಅಲಿಪುರ, ಶಾದಿಪುರ, ಎನ್‌ಎಸ್‌ಐಟಿ ದ್ವಾರಕಾ, ಡಿಟಿಯು ದೆಹಲಿ, ಐಟಿಒ, ಸಿರಿಫೋರ್ಟ್, ಮಂದಿರ್ ಮಾರ್ಗ್, ಆರ್.ಕೆ.ಪುರಂ ಮತ್ತು ಅಯಾ ನಗರ ಪ್ರದೇಶಗಳಲ್ಲಿ ಗುಣಮಟ್ಟ ಅತ್ಯಂತ ಕಳಪೆಯಾಗಿದೆ’ ಎಂದು ಮಾಹಿತಿ ನೀಡಿದೆ.
‘ಪಂಜಾಬ್‌ನಲ್ಲಿ ಭತ್ತದ ಕೂಳೆ ಸುಡುವ ಕಾರ್ಯ ತಗ್ಗಿದೆ. ಶನಿವಾರ 2,817 ಇದ್ದ ಈ ಸಂಖ್ಯೆ ಭಾನುವಾರ 599ಕ್ಕೆ ಇಳಿಕೆಯಾಗಿದೆ’ ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ತಿಳಿಸಿದೆ.
‘ಸೆಪ್ಟೆಂಬರ್ 15 ರಿಂದ ನವೆಂಬರ್ 4ರ ಅವಧಿಯಲ್ಲಿ ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ದೆಹಲಿಯಲ್ಲಿ ಭತ್ತದ ಕೂಳೆ ಸುಡುವ ಕಾರ್ಯ ಕಡಿಮೆಯಾಗಿದೆ. ಆದರೆ ಪಂಜಾಬ್‌ನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ’ ಎಂದು ಭಾರತೀಯ ಕೃಷಿ ಸಂಶೋಧನಾ ಕೌನ್ಸಿಲ್ ಮಾಹಿತಿ ನೀಡಿದೆ.
ನಿರ್ಬಂಧ ತೆರವಿಗೆ ಸೂಚನೆ: ದೆಹಲಿ–ಎನ್‌ಸಿಆರ್‌ನಲ್ಲಿ ಡೀಸೆಲ್ ಚಾಲಿತ ಲಘು ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧ ತೆರವುಗೊಳಿಸುವಂತೆ ಕೇಂದ್ರದ ಗಾಳಿ ಗುಣಮಟ್ಟ ಸಮಿತಿಯು ದೆಹಲಿಯ ಆಡಳಿತಕ್ಕೆ ನಿರ್ದೇಶಿಸಿದೆ.
ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮೂರು ದಿನಗಳ ಹಿಂದೆ ಡೀಸೆಲ್ ಚಾಲಿತ ಲಘು ವಾಹನಗಳ ಸಂಚಾರ ಹಾಗೂ ಟ್ರಕ್‌ಗಳು ನಗರ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.