ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತಾ ನಿಯಮ ಉಲ್ಲಂಘನೆ: ವಿಮಾನಯಾನ ಸಂಸ್ಥೆಗಳಿಗೆ ದಂಡ

Last Updated 1 ಜನವರಿ 2023, 14:36 IST
ಅಕ್ಷರ ಗಾತ್ರ

ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) 2022ರಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ವಿವಿಧ ವಿಮಾನಯಾನ ಸಂಸ್ಥೆಗಳು ಮತ್ತು ಇತರ ಸಂಬಂಧಪಟ್ಟವರ ವಿರುದ್ಧ ಒಟ್ಟು 305 ಜಾರಿ ಕ್ರಮಗಳನ್ನು ತೆಗೆದುಕೊಂಡಿದ್ದು, 39 ಪ್ರಕರಣಗಳಲ್ಲಿ ₹1.97 ಕೋಟಿ ದಂಡ ವಿಧಿಸಿದೆ.

ವಿಮಾನ ಕಾರ್ಯಾಚರಣೆಗಳ ಸುರಕ್ಷತೆಯಲ್ಲಿ ರಾಜೀಮಾಡಿಕೊಂಡ, ವಿಮಾನಗಳ ಸುರಕ್ಷಿತ ಭೂಸ್ಪರ್ಶ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದ ವಿಮಾನ ನಿಲ್ದಾಣ ನಿರ್ವಾಹಕರು, ನಿಗದಿತ ಮತ್ತು ನಿಗದಿತವಲ್ಲದ ನಿರ್ವಾಹಕರು ಹಾಗೂ ಹಾರಾಟ ತರಬೇತಿ ಸಂಸ್ಥೆಗಳು (ಎಫ್‌ಟಿಒಎಸ್‌) ಸೇರಿ ವಿವಿಧ ವಿಮಾನಯಾನ ಸಂಸ್ಥೆಗಳ ಮೇಲೆ ಜಾರಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಜಿಸಿಎ ಭಾನುವಾರ ಹೇಳಿದೆ.

ಡಿಜಿಸಿಎ ಪ್ರಕಾರ, 39 ಪ್ರಕರಣಗಳಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಎಫ್‌ಟಿಒಗಳಿಗೆ ದಂಡ ವಿಧಿಸಲಾಗಿದೆ. ಕೇದಾರನಾಥ ಯಾತ್ರಾ ಕಾರ್ಯಾಚರಣೆ ಸಮಯದಲ್ಲಿ ಎಸ್‌ಒಪಿ ಪಾಲಿಸದ ಐದು ನಿಗದಿತವಲ್ಲದ ನಿರ್ವಾಹಕರಿಗೂ ದಂಡ ವಿಧಿಸಲಾಗಿದೆ.

ಭಾವ್‌ನಗರ ವಿಮಾನ ನಿಲ್ದಾಣದ ರನ್‌ವೇನಲ್ಲಿ ಅವಶ್ಯಕವಾದ ಬೆಳಕಿನ ವ್ಯವಸ್ಥೆ ಮಾಡದ ಕಾರಣ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ), ಉಸಿರಾಟದ ವಿಶ್ಲೇಷಕ ತಪಾಸಣೆಗಳಿಗೆ ಮಾರ್ಗಸೂಚಿ ಪಾಲಿಸದಿದ್ದಕ್ಕಾಗಿ ಗೋ ಏರ್ ಸೇರಿ 17 ವಾಯುಯಾನ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ದಂಡ ವಿಧಿಸಿರುವ ಸಂಸ್ಥೆಗಳಲ್ಲಿ ಇಂಡಿಗೊ, ಏರ್‌ ಇಂಡಿಯಾ, ಸ್ಪೈಸ್‌ ಜೆಟ್‌ ಹಾಗೂ ವಿಸ್ತಾರಾ ಕೂಡ ಸೇರಿವೆ.

ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿಎಸ್‌) ಮತ್ತು ಸುರಕ್ಷತಾ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸದೇ ತಪ್ಪೆಸಗಿದ ಪೈಲಟ್‌ಗಳು, ಕ್ಯಾಬಿನ್‌ ಸಿಬ್ಬಂದಿ, ವಿಮಾನ ಸಂಚಾರ ನಿಯಂತ್ರಣಾಧಿಕಾರಿಗಳು, (ಎಟಿಸಿಒಎಸ್‌) ವಿಮಾನ ನಿರ್ವಹಣಾ ಎಂಜಿನಿಯರ್‌ಗಳು (ಎಎಂಇ) ಮತ್ತು ವಿವಿಧ ಹುದ್ದೆಯಲ್ಲಿರುವ ಸಿಬ್ಬಂದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಜಿಸಿಎ ಹೇಳಿದೆ.

ಡಿಜಿಸಿಎ ವರ್ಷದಲ್ಲಿ ಕೈಗೊಂಡ 305 ಜಾರಿ ಕ್ರಮಗಳಲ್ಲಿ ಗಂಭೀರ ಘಟನೆಗಳು ಮತ್ತು ಅಪಘಾತಗಳ ಸಂಬಂಧ ವಿಮಾನ ಸಿಬ್ಬಂದಿ ಮತ್ತು ಎಟಿಸಿಒಗಳು, ವಿಮಾನಗಳ ಅಸಮರ್ಪಕ ನಿರ್ವಹಣೆ, ವಿಮಾನ ನಿಲ್ದಾಣದಲ್ಲಿನ ಅಸಮರ್ಪಕ ಸೌಲಭ್ಯಗಳು, ಉಸಿರಾಟದ ವಿಶ್ಲೇಷಕ ಪರೀಕ್ಷೆಗಳಲ್ಲಿ ಸಿಕ್ಕಿಬಿದ್ದ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ, ಎಟಿಸಿಒಗಳು ಮತ್ತು ಎಎಂಇಗಳ ವಿರುದ್ಧ ತೆಗೆದುಕೊಂಡ ಕ್ರಮಗಳೂ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT