ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆಯೊಂದೇ ಪರಿಹಾರ: ಕೇಂದ್ರ

ಕೃಷಿ ಕಾಯ್ದೆ: ಮುಂದುವರಿದ ರೈತರ ಪ್ರತಿಭಟನೆ l ಕೆಲವು ರೈಲುಗಳ ಮಾರ್ಗ ಬದಲಾವಣೆ
Last Updated 1 ಫೆಬ್ರುವರಿ 2021, 18:52 IST
ಅಕ್ಷರ ಗಾತ್ರ

ನವದೆಹಲಿ: ‘ಸರ್ಕಾರದ ಹೃದಯದಲ್ಲೇ ರೈತರಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಬಜೆಟ್‌ ಮಂಡನೆಯ ಬಳಿಕ ತಿಳಿಸಿದರೂ, ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸೋಮವಾರವೂ ಮುಂದು ವರಿದಿದೆ. ಮಾತುಕತೆಯೊಂದೇ ಪರಿಹಾರ ಎಂಬುದನ್ನು ಕೇಂದ್ರ ಪುನರುಚ್ಚರಿಸಿದೆ.

‘ಈ ಬಿಕ್ಕಟ್ಟಿಗೆ ಮಾತುಕತೆಯೊಂದೇ ಪರಿಹಾರ. ಚರ್ಚೆಗೆ ಸರ್ಕಾರ ಮುಕ್ತ ಮನಸ್ಸಿನಿಂದಿದೆ. ಸ್ವತಃ ಪ್ರಧಾನಿ ಅವರೇ ಇದನ್ನು ಪುನರುಚ್ಚರಿಸಿದ್ದಾರೆ. ರೈತರಿಗೆ ಯಾವುದೇ ಪ್ರಶ್ನೆ ಇದ್ದರೆ, ಮಾತುಕತೆ ನಡೆಸುವ ಅವಕಾಶವನ್ನು ಕೃಷಿ ಸಚಿವರು ಎಂದೂ ನಿರಾಕರಿಸಿಲ್ಲ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಮಧ್ಯೆ, ದೆಹಲಿಯ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಸೋಮ ವಾರ ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯಲ್ಲಿ ರೈತರ ಮಹಾಪಂಚಾಯತ್‌ ನಡೆಯಿತು. ವಿವಾದಾತ್ಮಕ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆಗೆ ಬೆಂಬಲ ಸೂಚಿಸಿತು.

ಆರೋಪ: ‘ಕೆಲವರು ತಮ್ಮ ಸಂಕುಚಿತ ರಾಜಕೀಯ ಲಾಭಕ್ಕಾಗಿ ಬೆಂಕಿಗೆ ಇಂಧನ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ರೈತ ಸಂಘಟನೆಗಳು ತಿಳಿದುಕೊಳ್ಳುತ್ತವೆ ಎಂಬ ಆಶಯ ಹೊಂದಿದ್ದೇವೆ’ ಎಂದು ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್‌ ಚೌಧರಿ ಹೇಳಿದರು.

ಶೂನ್ಯ ಬಜೆಟ್‌: ‘ಈ ಬಾರಿ ರೈತರಿಗೆ ಶೂನ್ಯ ಬಜೆಟ್‌ ಅಷ್ಟೇ ಇರುತ್ತದೆ ಎಂದು ನಾವು ಮೊದಲೇ ಅಂದಾಜಿಸಿದ್ದೆವು. ಅದು ಸಾಬೀತಾಗಿದೆ’ ಎಂದು ಜೈಕಿಸಾನ್‌ ಆಂದೋಲನ್‌, ‘ಆಶಾ‘ ಮತ್ತು ರೈತ ಸ್ವರಾಜ್ಯ ವೇದಿಕೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

‘2022ರ ವೇಳೆಗೆ ರೈತರ ಆದಾಯ ವನ್ನು ದ್ವಿಗುಣಗೊಳಿಸಲಾಗುತ್ತದೆ ಎಂಬ ಐದು ವರ್ಷಗಳ ಯೋಜನೆಯ ಗಡುವು ಕೊನೆಗೊಳ್ಳುತ್ತ ಬಂದಿದ್ದು, ಬಜೆಟ್‌ನಲ್ಲಿ ಅದರ ಪ್ರಸ್ತಾಪವೇ ಇಲ್ಲ’ ಎಂದು ಸ್ವರಾಜ್‌ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್‌ ಟೀಕಿಸಿದ್ದಾರೆ.

ರಸ್ತೆ ತಡೆ: ಬಜೆಟ್‌ ಮಂಡನೆ ದಿನ ರೈತರು ದೆಹಲಿಯತ್ತ ಬರಬಾರದು ಎಂಬ ಕಾರಣಕ್ಕೆ ಉತ್ತರ ಪ್ರದೇಶದಿಂದ ದೆಹಲಿಯತ್ತ ಸಾಗುವ ಹಲವು ಮಾರ್ಗಗಳಲ್ಲಿ ಸೋಮವಾರ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಲು ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT