ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿ ಹೇಳಿಕೆಗೆ ದಿಗ್ವಿಜಯ್‌ ಪ್ರತಿಕ್ರಿಯೆ: ಬಿಜೆಪಿ, ಕಾಂಗ್ರೆಸ್‌ ವಾಕ್ಸಮರ

Last Updated 30 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದರ ಕುರಿತು ಜರ್ಮನಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವ ಮೂಲಕ ಪಕ್ಷವು ಇಕ್ಕಟ್ಟಿಗೆ ಸಿಲುಕುವಂತೆ ಪಕ್ಷದ ಮುಖಂಡ ದಿಗ್ವಿಜಯ್‌ ಸಿಂಗ್ ಮಾಡಿದ್ದಾರೆ. ಬಿಜೆಪಿ ಇದಕ್ಕೆ ಕಟುವಾದ ಪ್ರತಿಕ್ರಿಯೆ ನೀಡಿದೆ. ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಕಾಂಗ್ರೆಸ್ ಆಹ್ವಾನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ ಪಕ್ಷವು ದಿಗ್ವಿಜಯ್ ಹೇಳಿಕೆ ಯಿಂದ ಅಂತರ ಕಾಯ್ದುಕೊಂಡಿದೆ.

‘(ಪ್ರಧಾನಿ ನರೇಂದ್ರ) ಮೋದಿ ಅವರು ಸಂಸ್ಥೆಗಳಿಗೆ ಕೊಟ್ಟ ಹೊಡೆತ, ಅವರ ದ್ವೇಷ ರಾಜಕಾರಣ, ಬೆದರಿಕೆ, ಕಿರುಕುಳಗಳಿಂದಾಗಿ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಬೆದರಿಕೆಯನ್ನು ನಿರ್ವಹಿಸಲು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳೇ ಸಾಕು ಎಂಬುದನ್ನು ಕಾಂಗ್ರೆಸ್ ದೃಢವಾಗಿ ನಂಬಿದೆ. ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಅವರನ್ನು ನಿರ್ಭೀತಿಯಿಂದ ಎದುರಿಸಲಿವೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಆದರೆ, ಬಿಜೆಪಿ ಅಷ್ಟು ಹೊತ್ತಿಗಾಗಲೇ ‍ಪ್ರಮುಖ ನಾಯಕರನ್ನು ಕಣಕ್ಕೆ ಇಳಿಸಿ ಟೀಕೆ ಆರಂಭಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ತೀವ್ರ ಚರ್ಚೆಗೆ ಒಳಗಾಗಿದೆ. ರಾಹುಲ್ ಅವರು ಸೇಡು ತೀರಿಸಿಕೊಳ್ಳುವುದಕ್ಕಾಗಿ ವಿದೇಶಿ ಶಕ್ತಿಗಳನ್ನು ಆಹ್ವಾನಿಸುತ್ತಿದ್ದಾರೆ. ಮೊದಲು ಅವರು ಅದನ್ನು ಸಂಸತ್ತಿನಲ್ಲಿ ಮಾಡಿದರು ಎಂದು ಬಿಜೆಪಿ ಹೇಳಿದೆ.

ಜರ್ಮನಿಯ ಪತ್ರಿಕೆ ‘ಡಾಯ್‌ಚು ವೆಲ್ಲೆ’ ಅಂತರರಾಷ್ಟ್ರೀಯ ಸಂಪಾದಕ ರಿಚರ್ಡ್‌ ವಾಕರ್‌ ಅವರ ಹೇಳಿಕೆಗೆ ದಿಗ್ವಿಜಯ್ ಅವರು ಕೃತಜ್ಞತೆ ಸಲ್ಲಿಸುವುದರೊಂದಿಗೆ ಈಗಿನ ವಿವಾದ ಆರಂಭವಾಯಿತು. ‘ರಾಹುಲ್‌ ಗಾಂಧಿಗೆ ಕಿರುಕುಳ ನೀಡುವ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಹೇಗೆ ಧಕ್ಕೆಯಾಗಿದೆ ಎಂಬುದನ್ನು ಗಮನಿಸಿದ್ದೇವೆ’ ಎಂದಿದ್ದರು.

ಜರ್ಮನಿಯ ವಿದೇಶಾಂಗ ವಕ್ತಾರರ ವಿಡಿಯೊವೊಂದನ್ನು ದಿಗ್ವಿಜಯ್ ಅವರು ಟ್ವೀಟ್‌ಗೆ ಟ್ಯಾಗ್‌ ಮಾಡಿದ್ದಾರೆ. ‘ಭಾರತದ ವಿರೋಧ ಪಕ್ಷದ ರಾಜಕಾರಣಿ ರಾಹುಲ್‌ ಗಾಂಧಿ ಅವರಿಗೆ ಪ್ರಕಟಿಸಿದ ಶಿಕ್ಷೆ ಮತ್ತು ಸದಸ್ಯತ್ವದಿಂದ ಅವರನ್ನು ಅನರ್ಹ ಮಾಡಿರುವುದನ್ನು ಗಮನಿಸಿದ್ದೇವೆ’ ಎಂದು ಅಲ್ಲಿನ ವಿದೇಶಾಂಗ ಸಚಿವೆ ಹೇಳಿದ್ದು ವಿಡಿಯೊದಲ್ಲಿ ಇದೆ.

‘ನಮಗೆ ತಿಳಿದಿರುವ ಪ್ರಕಾರ, ರಾಹುಲ್‌ ಅವರು ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಮೇಲ್ಮನವಿಯ ನಂತರ, ಸದಸ್ಯತ್ವ ಅನರ್ಹತೆಗೆ ಏನಾದರೂ ಆಧಾರ ಇದೆಯೇ ಎಂಬುದು ತಿಳಿಯುತ್ತದೆ. ರಾಹುಲ್‌ ಅವರ ವಿಚಾರಣೆಯಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳು ಅನ್ವಯ ಆಗಬೇಕು ಎಂದು ಜರ್ಮನಿ ಬಯಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ದಿಗ್ವಿಜಯ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶವೊಂದು ಹಸ್ತಕ್ಷೇಪ ನಡೆಸಬೇಕು ಎಂದು ಕಾಂಗ್ರೆಸ್ ಬಯಸಿದೆ ಎಂದಿದ್ದಾರೆ.

ದಿಗ್ವಿಜಯ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ರಿಜಿಜು ಅವರು ಟ್ವೀಟ್‌ಗೆ ಟ್ಯಾಗ್‌ ಮಾಡಿದ್ದಾರೆ. ‘ಭಾರತದ ವ್ಯವಹಾರಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಆಹ್ವಾನ ನೀಡಿದ್ದಾಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ. ಆದರೆ, ಭಾರತದ ನ್ಯಾಯಾಂಗದ ಮೇಲೆ ವಿದೇಶಿ ಹಸ್ತಕ್ಷೇಪ ಪರಿಣಾಮ ಬೀರದು. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ. ಹಾಗಾಗಿ, ವಿದೇಶಿ ಪ್ರಭಾವವನ್ನು ಭಾರತವು ಸಹಿಸಿಕೊಳ್ಳುವುದಿಲ್ಲ’ ಎಂದು ರಿಜಿಜು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಆದರೆ, ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ತಿರುಗೇಟು ನೀಡಿದ್ದಾರೆ. ‘ಮುಖ್ಯ ವಿಚಾರದಿಂದ ಗಮನ ಬೇರೆಡೆ ಸೆಳೆಯುವ ಕೆಲಸ ಏಕೆ ಮಾಡುತ್ತಿದ್ದೀರಿ? ರಾಹುಲ್ ಗಾಂಧಿ ಅವರು ಅದಾನಿ ಕುರಿತಂತೆ ಕೇಳಿದ ಪ್ರಶ್ನೆಗಳಿಗೆ ಪ್ರಧಾನಿಗೆ ಉತ್ತರಿಸಲು ಆಗುತ್ತಿಲ್ಲ ಎಂಬುದೇ ಇಲ್ಲಿನ ಮುಖ್ಯ ವಿಚಾರ’ ಎಂದಿದ್ದಾರೆ.

ದಿಗ್ವಿಜಯ್ ಅವರು ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಿದ್ದು ಇದೇ ಮೊದಲಲ್ಲ. ರಾಹುಲ್‌ ಅವರು ‘ಭಾರತ್‌ ಜೋಡೊ ಯಾತ್ರೆ’ ನಡೆಸುತ್ತಿದ್ದಾಗ ಬಾಲಾಕೋಟ್‌ ದಾಳಿಯನ್ನು ಪ್ರಶ್ನಿಸಿ ದಿಗ್ವಿಜಯ್ ಅವರು ವಿವಾದ ಸೃಷ್ಟಿಸಿದ್ದರು. ಜಮ್ಮುವಿನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ್ದ ಅವರು ‘ಅವರು (ಕೇಂದ್ರ ಸರ್ಕಾರ) ನಿರ್ದಿಷ್ಟ ದಾಳಿ ಕುರಿತು ಮಾತನಾಡುತ್ತಿದ್ದಾರೆ.
ಹಲವು ಉಗ್ರರನ್ನು ಕೊಂದಿದ್ದೇವೆ ಎನ್ನುತ್ತಾರೆ. ಆದರೆ ಅದಕ್ಕೆ ಸಾಕ್ಷ್ಯ ಎಲ್ಲಿದೆ’ ಎಂದು ಪ್ರಶ್ನಿಸಿದ್ದರು. ಇದಕ್ಕೂ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಬ್ರಿಟನ್‌ ನ್ಯಾಯಾಲಯದಲ್ಲಿ ರಾಹುಲ್‌ ವಿರುದ್ಧ ಪ್ರಕರಣ: ಲಲಿತ್ ಮೋದಿ

ಲಂಡನ್‌ (ಪಿಟಿಐ): ಮೋದಿ ಉಪನಾಮ ಅವಹೇಳನ ಮಾಡಿರುವ ರಾಹುಲ್ ಗಾಂಧಿಯ ವಿರುದ್ಧ ಬ್ರಿಟನ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದು ಐಪಿಎಲ್‌ ಆಯೋಜನೆಯಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಲಲಿತ್ ಮೋದಿ ಹೇಳಿದ್ದಾರೆ.

ಐಪಿಎಲ್‌ ಅಕ್ರಮ ಆರೋಪದ ಬೆನ್ನಲ್ಲೇ 2010ರಲ್ಲಿ ಭಾರತದಿಂದ ಪರಾರಿಯಾಗಿದ್ದ ಲಲಿತ್ ಮೋದಿ, ಲಂಡನ್‌ನಲ್ಲಿ ನೆಲೆಸಿದ್ದಾರೆ. 2019ರಲ್ಲಿ ಕೋಲಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಎಲ್ಲ ಕಳ್ಳರ ಹೆಸರಲ್ಲೂ ಮೋದಿ ಇರುವುದೇಕೆ ಎಂದು ಕೇಳಿದ್ದ ರಾಹುಲ್‌, ಲಲಿತ್ ಮೋದಿಯ ಹೆಸರನ್ನೂ ಉಲ್ಲೇಖಿಸಿದ್ದರು.

ರಾಹುಲ್ ವಿರುದ್ಧ ಲಿಲಿತ್ ಮೋದಿ ಮಾಡಿರುವ ಸರಣಿ ಟ್ವೀಟ್‌ಗಳಲ್ಲಿ ವ್ಯಾಕರಣ ದೋಷಗಳೇ ತುಂಬಿವೆ ಎಂದು ಪಿಟಿಐ ವರದಿ ಮಾಡಿದೆ. ನಾನು ದೇಶದಿಂದ ಪರಾರಿಯಾಗಿದ್ದೇನೆ ಎಂದು ಗಾಂಧಿಯ ಅನುಯಾಯಿಗಳು ಪದೇ–ಪದೇ ಹೇಳುತ್ತಿದ್ದಾರೆ. ಆದರೆ, ನನಗೆ ಯಾವುದೇ ಶಿಕ್ಷೆಯಾಗಿಲ್ಲವಲ್ಲ. ಈಗ ಸಾಮಾನ್ಯ ಮನುಷ್ಯನಂತಾಗಿರುವ ಪಪ್ಪು ಅಲಿಯಾಸ್ ರಾಹುಲ್‌ ಗಾಂಧಿ ಅದನ್ನು ಹೇಳುತ್ತಿದ್ದಾರೆ. ಆದರೆ, ಅದನ್ನೇ ಹೇಳುತ್ತಿರುವ ಎಲ್ಲಾ ವಿಪಕ್ಷಗಳ ನಾಯಕರಿಗೆ ಬೇರೆ ಕೆಲಸ ಇಲ್ಲ ಎನಿಸುತ್ತಿದೆ. ರಾಹುಲ್‌ ಗಾಂಧಿಯನ್ನು ಇಲ್ಲಿನ ನ್ಯಾಯಾಲಯಕ್ಕೆ ಎಳೆಯುತ್ತೇನೆ. ಆತ ಮುಟ್ಠಾಳ ಎಂದು ತೋರಿಸಲು ಕಾತರನಾಗಿದ್ದೇನೆ ಎಂದು ಲಲಿತ್ ಮೋದಿ ಟ್ವೀಟ್‌ ಮಾಡಿದ್ದಾರೆ.

‘ಗಾಂಧಿ ಕುಟುಂಬ ದೇಶಕ್ಕೆ ಮಾಡಿರುವುದಕ್ಕಿಂತ ಹೆಚ್ಚಿನದನ್ನು ಮೋದಿ ಕುಟುಂಬ ಮಾಡಿದೆ. ನಾನು ದೇಶಕ್ಕಾಗಿ ಈ ಅದ್ಭುತವಾದ ಕ್ರೀಡಾಕೂಟವನ್ನು ರೂಪಿಸಿದ್ದೇನೆ. ಅದರಿಂದ ಲಕ್ಷಾಂತರ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT