ಮಂಗಳವಾರ, ಜೂನ್ 28, 2022
20 °C

ವೈದ್ಯರು ದೇವದೂತರು, ಶೀಘ್ರದಲ್ಲೇ ಲಸಿಕೆ ಪಡೆಯುವೆ: ಬಾಬಾ ರಾಮದೇವ್‌

ಪಿಟಿಐ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌ (ಉತ್ತರಾಖಂಡ): ‘ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್-19 ಲಸಿಕೆ ಅಗತ್ಯ ನನಗಿಲ್ಲ,’ ಎಂದಿದ್ದ ಯೋಗ ಗುರು ಬಾಬಾ ರಾಮದೇವ್ ಈಗ ಮಾತು ಬದಲಿಸಿದ್ದಾರೆ. ಶೀಘ್ರದಲ್ಲೇ ಲಸಿಕೆ ಪಡೆಯುವುದಾಗಿ ತಿಳಿಸಿರುವ ಅವರು, ವೈದ್ಯರನ್ನು ‘ಭೂಮಿಯ ಮೇಲಿನ ದೇವದೂತರು‘ ಎಂದು ಬಣ್ಣಿಸಿದ್ದಾರೆ.

ಕೋವಿಡ್-19 ಮೇಲೆ ಅಲೋಪಥಿ ಔಷಧಿಗಳ ಪರಿಣಾಮಕಾರಿತ್ವದ ಬಗ್ಗೆ ಇತ್ತೀಚೆಗೆ ಸಂಶಯ ವ್ಯಕ್ತಪಡಿಸಿದ್ದ ಬಾಬಾ ರಾಮದೇವ್ ವಿವಾದ ಹುಟ್ಟುಹಾಕಿದ್ದರು. ಇದು ವೈದ್ಯಕೀಯ ರಂಗದ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಮಧ್ಯೆ, ಜೂನ್ 21 ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ಸ್ವಾಗತಿಸಿರುವ ಬಾಬಾ ರಾಮದೇವ್, ಇದೊಂದು ‘ಐತಿಹಾಸಿಕ ನಡೆ‘ ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ಎಲ್ಲರೂ ಲಸಿಕೆ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.

‘ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನೂ ಪಡೆಯಿರಿ. ಯೋಗ ಮತ್ತು ಆಯುರ್ವೇದದ ರಕ್ಷಣೆಗಳನ್ನೂ ಪಡೆದುಕೊಳ್ಳಿ. ಈ ಎರಡರಿಂದಲೂ ಬಲವಾದ ರಕ್ಷಣೆ ಸಿಗುತ್ತದೆ. ಆಗ ಕೋವಿಡ್‌ಗೆ ಯಾವೊಬ್ಬ ವ್ಯಕ್ತಿಯೂ ಪ್ರಾಣಬಿಡುವುದಿಲ್ಲ,‘ ಎಂದು ಹರಿದ್ವಾರದಲ್ಲಿ ಸುದ್ದಿಗಾರರಿಗೆ ಬಾಬಾ ತಿಳಿಸಿದ್ದಾರೆ.

ನೀವು ಯಾವಾಗ ಲಸಿಕೆ ಪಡೆಯುವಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ರಾಮದೇವ್‌, ‘ಶೀಘ್ರದಲ್ಲೇ’ ಎಂದಿದ್ದಾರೆ.

ಉತ್ತಮ ಅಲೋಪಥಿ ವೈದ್ಯರ ಬಗ್ಗೆ ರಾಮದೇವ್ ಪ್ರಶಂಸೆ ವ್ಯಕ್ತಪಡಿಸಿದರು. ಅವರನ್ನು ‘ಭೂಮಿಯ ಮೇಲಿನ ದೇವದೂತರು’ ಎಂದು ಬಣ್ಣಿಸಿದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಜತೆಗಿನ ತಿಕ್ಕಾಟದ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಾನು ಯಾವುದೇ ಸಂಘಟನೆಯೊಂದಿಗೆ ದ್ವೇಷ ಹೊಂದಿಲ್ಲ. ಔಷಧಿಗಳ ಹೆಸರಿನಲ್ಲಿ ಜನರ ಮೇಲೆ ನಡೆಯುವ ಶೋಷಣೆಗೆ ನನ್ನ ವಿರೋಧ,’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು