ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 8 ಮಂದಿ ಸಾವು; ಐವರಿಗೆ ಗಾಯ

ಮಧ್ಯಪ್ರದೇಶದ ದಮೊಹ್‌ ನಾಕಾ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
Last Updated 1 ಆಗಸ್ಟ್ 2022, 16:16 IST
ಅಕ್ಷರ ಗಾತ್ರ

ಜಬಲ್‌ಪುರ: ಮಧ್ಯಪ್ರದೇಶದ ದಮೊಹ್‌ ನಾಕಾ ಬಳಿಯ ನ್ಯೂ ಲೈಫ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 8 ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

‘ಅವಘಡದಲ್ಲಿ ನಾಲ್ವರು ರೋಗಿಗಳು, ಶುಶ್ರೂಷಕಿ ಹಾಗೂ ಮೂವರು ಸಿಬ್ಬಂದಿ ಅಸುನೀಗಿದ್ದಾರೆ.ಗಾಯಗೊಂಡಿರುವ ಐವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ’ ಎಂದುಜಿಲ್ಲಾಧಿಕಾರಿ ಟಿ.ಇಳಯರಾಜ ತಿಳಿಸಿದ್ದಾರೆ.

‘ಮೂರು ಅಂತಸ್ತಿನ ಕಟ್ಟಡದಲ್ಲಿರುವ ಆಸ್ಪತ್ರೆಯು 30 ಹಾಸಿಗೆ ಸಾಮರ್ಥ್ಯ ಹೊಂದಿದೆ. ಬೆಂಕಿ ಕಾಣಿಸಿಕೊಂಡಾಗ ಆಸ್ಪತ್ರೆಯಲ್ಲಿ 20 ರಿಂದ 25 ಮಂದಿ ಇದ್ದರು. ಎನ್‌ಡಿಆರ್‌ಎಫ್‌ ಸಿಬ್ಬಂದಿ ಅವರನ್ನೆಲ್ಲಾ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಗೋಹಲ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆಸ್ಪತ್ರೆ ಇದ್ದು, ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಾರ್ಥ್‌ ಬಹುಗುಣ ಹೇಳಿದ್ದಾರೆ.

₹5 ಲಕ್ಷ ಪರಿಹಾರ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ ₹50 ಸಾವಿರ ನೆರವು ಪ್ರಕಟಿಸಿದ್ದಾರೆ.

‘ಇದು ಅತ್ಯಂತ ನೋವಿನ ಸಂಗತಿ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಗ್ನಿಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶಿವರಾಜ್‌ ಸಿಂಗ್‌ ಚೌಹಾಣ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT