ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಿಕ್‌ ಬೈಕ್ ಷೋರೂಂನಲ್ಲಿ ಅಗ್ನಿ ಅವಘಡ: 8 ಮಂದಿ ಸಾವು

ಮೃತರಿಗೆ ಪ್ರಧಾನಿ ಪರಿಹಾರ ಘೋಷಣೆ
Last Updated 13 ಸೆಪ್ಟೆಂಬರ್ 2022, 10:47 IST
ಅಕ್ಷರ ಗಾತ್ರ

ಹೈದರಾಬಾದ್: ಇಲ್ಲಿನ ಸಿಕಂದರಾಬಾದ್ ಪ್ರದೇಶದಲ್ಲಿನ ಎಲೆಕ್ಟ್ರಿಕ್‌ ಬೈಕ್ ಷೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮೇಲ್ಮಹಡಿಯ ಹೋಟೆಲ್‌ನಲ್ಲಿದ್ದ ಮಹಿಳೆ ಸೇರಿದಂತೆ ಎಂಟು ಮಂದಿ ಸಾವಿಗೀಡಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮೃತರಲ್ಲಿ ಬಹುತೇಕರು ಹೊಗೆಯಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಹೋಟೆಲ್ ರೂಬಿ ಪ್ರೈಡ್‌ನ ಕೆಳಮಹಡಿಯಲ್ಲಿ ಎಲೆಕ್ಟ್ರಿಕ್‌ ಬೈಕ್ ಷೋರೂಂ ಇದ್ದು, ಅದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದರಿಂದ ದಟ್ಟವಾದ ಹೊಗೆ ಆವರಿಸಿದೆ. ನಾಲ್ಕು ಮಹಡಿಗಳ ಹೋಟೆಲ್‌ನಲ್ಲಿ 23 ಕೊಠಡಿಗಳಿದ್ದು, ಕೆಳಮಹಡಿಯಲ್ಲಿ ಕಾಣಿಸಿಕೊಂಡ ಹೊಗೆ ಮೇಲ್ಮಡಿಗಳವರೆಗೆ ದಟ್ಟವಾಗಿ ಹಬ್ಬಿದೆ. ಹೋಟೆಲ್‌ನಲ್ಲಿದ್ದ ಕೆಲವರು ಮೊದಲ ಮತ್ತು ಎರಡನೇ ಮಹಡಿಯಲ್ಲಿ ಮಲಗಿದ್ದರು. ಅಗ್ನಿ ಅವಘಡದಿಂದ ಎಚ್ಚರಗೊಂಡಿದ್ದ ಅವರು ರಕ್ಷಣೆಗಾಗಿ ಹೋಟೆಲ್‌ನ ಕೆಳಮಹಡಿಗೆ ಬಂದಾಗ ಅಲ್ಲಿ ದಟ್ಟ ಹೊಗೆಯಲ್ಲಿ ಸಿಲುಕಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ’ ಎಂದು ಹೈದರಾಬಾದ್‌ನ ಪೊಲೀಸ್ ಕಮಿಷನರ್ ಸಿ.ವಿ. ಆನಂದ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

‘ಅಗ್ನಿ ಅವಘಡಕ್ಕೆ ಖಚಿತವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಷೋರೂಂನ ನೆಲಮಹಡಿಯಲ್ಲಿ (ಸೆಲ್ಲರ್‌) ಎಲೆಕ್ಟ್ರಿಕಲ್ ಬೈಕ್‌ಗಳ ಬ್ಯಾಟರಿಗಳನ್ನು ಚಾರ್ಜಿಂಗ್‌ಗೆ ಇಟ್ಟಿದ್ದರಿಂದ ಅಥವಾ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆಯೇ ಎಂಬುದು ಖಚಿತವಾಗಿಲ್ಲ. ಈ ಕುರಿತು ಅಗ್ನಿ ಶಾಮಕ ಇಲಾಖೆಯ ತನಿಖೆಯಿಂದ ಖಚಿತ ಕಾರಣ ತಿಳಿಯಬಹುದು’ ಎಂದು ಅವರು ಹೇಳಿದ್ದಾರೆ.

‘ಸಾಮಾನ್ಯವಾಗಿ ಸೆಲ್ಲರ್ ಅನ್ನು ವಾಹನಗಳ ಪಾರ್ಕಿಂಗ್‌ಗೆ ಬಳಸುತ್ತಾರೆ. ಆದರೆ, ಷೋರೂಂನವರು ಅಲ್ಲಿ ಬೇರೆನೋ ಮಾಡುತ್ತಿರಬಹುದು. ಈ ಬಗ್ಗೆ ತನಿಖೆ ಕೈಗೊಂಡಾಗ ಮಾತ್ರ ನಿಖರ ಕಾರಣ ತಿಳಿಯಲಿದೆ’ ಎಂದೂ ಆನಂದ್ ತಿಳಿಸಿದ್ದಾರೆ.

ದುರ್ಘಟನೆಯ ವೇಳೆ ಹೋಟೆಲ್‌ನಲ್ಲಿ 24 ಮಂದಿ ತಂಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಏಳು ಮಂದಿಯನ್ನು ರಕ್ಷಿಸಿದ್ದಾರೆ. ಬೆಂಕಿಯಿಂದ ಪಾರಾಗಲು ಕೆಲವರು ಹೋಟೆಲ್‌ಗಳ ಕಿಟಕಿಗಳಿಂದ ಜಿಗಿದರು ಎಂದು ಕೆಲ ಟಿ.ವಿ. ವಾಹಿನಿಗಳು ವರದಿ ಮಾಡಿವೆ.

ಪರಿಹಾರ ಘೋಷಣೆ: ದುರ್ಘಟನೆಯಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲಂಗಾಣದ ಐಟಿ ಹಾಗೂ ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ಅವರು ಕೇಂದ್ರ ಹಾಗೂ ರಾಜ್ಯಸರ್ಕಾರದ ವತಿಯಿಂದ ಪರಿಹಾರ ಘೋಷಿಸಿದ್ದಾರೆ.

ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಹಾಗೂ ಗಾಯಾಳುಗಳಿಗೆ ₹ 50 ಸಾವಿರ ನೀಡುವುದಾಗಿ ಮೋದಿ ಟ್ವೀಟ್‌ ಮಾಡಿದ್ದಾರೆ.ತೆಲಂಗಾಣ ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ₹3 ಲಕ್ಷ ಪರಿಹಾರ ನೀಡಲಿದೆ ಎಂದು ಸಚಿವ ರಾಮರಾವ್ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT