ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆನಲ್ಲಿ ‘ಮಂಡಲಂ–ಮಕರವಿಳಕ್ಕು’ ಪೂಜೆಗೆ ಸಕಲ ಸಿದ್ಧತೆ

Last Updated 14 ನವೆಂಬರ್ 2020, 11:02 IST
ಅಕ್ಷರ ಗಾತ್ರ

ತಿರುವನಂತಪುರಂ: ಶಬರಿಮಲೆನಲ್ಲಿ ನಡೆಯಲಿರುವ ವಾರ್ಷಿಕ ಮಂಡಲಂ–ಮಕರವಿಳಕ್ಕು’ ಅವಧಿಯ ಪೂಜೆಗಾಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಲು ಒಂದು ದಿನ ಬಾಕಿಯಿದ್ದು, ಕೋವಿಡ್‌ ಸೋಂಕು ದೃಢಪಟ್ಟವರು ದೇವಸ್ಥಾನಕ್ಕೆ ಬರದಂತೆ ನಿಯಂತ್ರಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಶಬರಿಮಲೆಯಲ್ಲಿನ ಸಿದ್ಧತೆಗಳ ಪರಿಶೀಲನೆಗಾಗಿ ಶುಕ್ರವಾರ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವಸ್ವಂ ಸಚಿವ ಕಾಡಕಂಪಲ್ಲಿ ಸುರೇಂದ್ರನ್‌, ‘ಭಾರಿ ಪ‍್ರಮಾಣದಲ್ಲಿ ಜನ ಸೇರುವುದನ್ನು ನಿಯಂತ್ರಿಸಲು ಈ ಬಾರಿ ಶಬರಿಮಲೆಯ ಪೂರ್ಣ ಯಾತ್ರೆಯನ್ನು ವರ್ಚುವಲ್‌ ಮೂಲಕ ನಿರ್ವಹಿಸಲಾಗುತ್ತಿದೆ’ ಎಂದು ಹೇಳಿದರು.

‘ಪ್ರತಿ ಭಕ್ತರು ಶಬರಿಮಲೆ ಯಾತ್ರೆಗೆ ಬರುವ 24 ಗಂಟೆಗಳಿಗೆ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿರಬೇಕು. ನೆಗೆಟಿವ್ ಪ್ರಮಾಣ ಪತ್ರ ಪಡೆದಿದ್ದವರು ಮಾತ್ರ ದೇವಸ್ಥಾನ ಪ್ರವೇಶಿಸಬಹುದು. ಕೋವಿಡ್ ಪರೀಕ್ಷೆಗಾಗಿಪಂಪಾ ಮತ್ತು ನೀಲಕ್ಕಲ್‌ ಶಿಬಿರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಇಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ವರದಿ ನೆಗೆಟಿವ್ ಬಂದರೆ ದೇವಸ್ಥಾನಕ್ಕೆ ತೆರಳಬಹುದು. ಸೋಂಕು ದೃಢಪಟ್ಟರೆ ಅಂಥವರಿಗೆ ಕೊಟ್ಟಾಯಂನ ಪತ್ತನತಿಟ್ಟನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ‘ ಎಂದು ಸಚಿವರು ತಿಳಿಸಿದರು.

ಇದರ ಜತೆಗೆ ತಿರುವನಂತಪುರ, ತಿರುವಲ, ಚೆಂಗನೂರು ಮತ್ತು ಕೊಟ್ಟಾಯಂ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಆ್ಯಂಟಿಜನ್‌ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆಯು ವ್ಯವಸ್ಥೆ ಮಾಡಿದೆ’ ಎಂದು ಅವರು ತಿಳಿಸಿದರು.

ಅಯ್ಯಪ್ಪಸ್ವಾಮಿ ದರ್ಶನದ ವೇಳೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರತಿ ಭಕ್ತರಿಗಾಗಿ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ದೇವಾಲಯಕ್ಕೆ ಬರುವ 60 ರಿಂದ 65 ಕ್ಕಿಂತ ಹೆಚ್ಚಿನ ವಯಸ್ಸಿನ ಭಕ್ತರು ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT