ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿ.ವಿ ಕ್ಯಾಂಪಸ್‌ ಸ್ಥಾಪನೆ: ಕರಡು ನಿಯಮ ಪ್ರಕಟಿಸಿದ ಯುಜಿಸಿ

Last Updated 5 ಜನವರಿ 2023, 22:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಪೂರಕವಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕರಡು ನಿಯಮಗಳನ್ನು ಗುರುವಾರ ಬಿಡುಗಡೆ ಮಾಡಿದೆ.

ಇದರ ಪ್ರಕಾರ ಈ ವಿಶ್ವವಿದ್ಯಾಲಯಗಳು ತಮ್ಮ ಪ್ರವೇಶ ಪ್ರಕ್ರಿಯೆ, ಶುಲ್ಕ ರಚನೆಯನ್ನು ತಾವೇ ನಿರ್ಧರಿಸುವ ಅಧಿಕಾರ ಹೊಂದಿರುತ್ತವೆ. ಅಲ್ಲದೇ, ತನ್ನ ನಿಧಿಯನ್ನು ಮಾತೃ ದೇಶಕ್ಕೆ ತೆಗೆದುಕೊಂಡು ಹೋಗುವ ಅವಕಾಶವನ್ನೂ ಕಲ್ಪಿಸಲಾಗಿದೆ.

‘ಆಫ್‌ಲೈನ್‌’ ಕೋರ್ಸ್‌ಗಳಿಗಷ್ಟೇ ಅವಕಾಶ: ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸುವ ವಿದೇಶಿ ವಿಶ್ವವಿದ್ಯಾಲಯಗಳು ಪೂರ್ಣಾವಧಿಯ ಕೋರ್ಸ್‌ಗಳನ್ನು ‘ಆಫ್‌ಲೈನ್‌’ ಮೋಡ್‌ನಲ್ಲಿ ಮಾತ್ರವೇ ಒದಗಿಸಬೇಕು. ‘ಆನ್‌ಲೈನ್‌’ ಅಥವಾ ದೂರ ಶಿಕ್ಷಣ ಮಾದರಿಯಲ್ಲಿ ಕೋರ್ಸ್‌ಗಳನ್ನು ನಡೆಸಬಾರದು ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

ವಿದೇಶಿ ವಿ.ವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸಲು ಯುಜಿಸಿಯಿಂದ ಅನುಮೋದನೆ ಪಡೆಯಬೇಕು ಎಂದು ಅವರು ಹೇಳಿದ್ದಾರೆ.

ಆರಂಭಿಕವಾಗಿ 10 ವರ್ಷಗಳ ಅವಧಿಗೆ ಅನುಮೋದನೆ ನೀಡಲಾಗುತ್ತದೆ. ಕೆಲ ಷರತ್ತುಗಳನ್ನು ಪೂರೈಸಿದಲ್ಲಿ, 9ನೇ ವರ್ಷಕ್ಕೆ ಅನುಮೋದನೆಯನ್ನು ನವೀಕರಿಸಲು ಅವಕಾಶವಿದೆ. ಈ ಸಂಸ್ಥೆಗಳು ದೇಶದ ಹಿತಾಸಕ್ತಿಗೆ ಅಥವಾ ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ತರುವಂತಹ ಯಾವುದೇ ಅಧ್ಯಯನ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ ಎಂದು ಕರಡಿನಲ್ಲಿ ತಿಳಿಸಲಾಗಿದೆ.

‘ತಿಂಗಳಾಂತ್ಯಕ್ಕೆ ಅಧಿಸೂಚನೆ’:

ಸಂಬಂಧಪಟ್ಟ ಭಾಗಿದಾರರು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ನಿಯಮಗಳ ಕುರಿತು ತಿಂಗಳಾಂತ್ಯಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಯುಜಿಸಿ ತಿಳಿಸಿದೆ.

ಈ ವಿಶ್ವವಿದ್ಯಾಲಯಗಳು ಪ್ರವೇಶ ಮಾನದಂಡ ಮತ್ತು ಶುಲ್ಕ ರಚನೆಯನ್ನು ತಾವೇ ನಿರ್ಧರಿಸುವ ಸ್ವಾತಂತ್ರ್ಯ ಹೊಂದಿದ್ದರೂ, ಶುಲ್ಕ ನಿಗದಿಯು ಸಮಂಜಸ ಮತ್ತು ಪಾರದರ್ಶಕತೆಯಿಂದ ಕೂಡಿರಬೇಕು ಎಂದು ಯುಜಿಸಿ ಸಲಹೆ ನೀಡಿದೆ.

ವಿದೇಶಗಳಲ್ಲಿನ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳು ಭಾರತಕ್ಕೆ ಬಂದು, ಇಲ್ಲಿನ ಶಿಕ್ಷಣಕ್ಕೆ ಅಂತರ
ರಾಷ್ಟ್ರೀಯ ಆಯಾಮವನ್ನು ನೀಡುತ್ತವೆ. ಅಲ್ಲದೆ ಭಾರತೀಯ ವಿದ್ಯಾರ್ಥಿಗಳಿಗೆ ಕೈಗೆಟಕುವ ವೆಚ್ಚದಲ್ಲಿ ವಿದೇಶಗಳಲ್ಲಿರುವ ಶೈಕ್ಷಣಿಕ ಅರ್ಹತೆ ಒದಗಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪರಿಶೀಲನೆಗೆ ಸ್ಥಾಯಿ ಸಮಿತಿ:

ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಸ್ಥಾಪನೆ ಮತ್ತು ಕಾರ್ಯಾಚರಣೆ ಕುರಿತು ಪರಿಶೀಲಿಸಲು ಯುಜಿಸಿ ಸ್ಥಾಯಿ ಸಮಿತಿಗಳನ್ನು ರಚಿಸುತ್ತದೆ. ಈ ಸಮಿತಿಯು ವಿದೇಶಿ ಶೈಕ್ಷಣಿಕ ಸಂಸ್ಥೆಗಳ ವಿಶ್ವಾಸಾರ್ಹತೆ, ನಡೆಸುವ ಕೋರ್ಸ್‌, ಕಾರ್ಯಕ್ರಮಗಳು, ಭಾರತದಲ್ಲಿ ಶೈಕ್ಷಣಿಕ ಅವಕಾಶಗಳನ್ನು ಬಲಪಡಿಸುವ ಸಾಮರ್ಥ್ಯ, ಶೈಕ್ಷಣಿಕ ಮೂಲಸೌಕರ್ಯಗಳ ಕುರಿತ ಅರ್ಜಿಗಳನ್ನು ಪರಿಶೀಲಿಸಿ, ಶಿಫಾರಸು ಮಾಡುತ್ತದೆ ಎಂದು ಕುಮಾರ್‌ ತಿಳಿಸಿದ್ದಾರೆ.

ವಿದೇಶಿ ಶೈಕ್ಷಣಿಕ ಸಂಸ್ಥೆಯು ತನ್ನ ನೇಮಕಾತಿ ನಿಯಮಗಳ ಪ್ರಕಾರ ಭಾರತ ಮತ್ತು ವಿದೇಶದಿಂದ ಬೋಧಕವರ್ಗ ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸ್ವಾಯತ್ತತೆ ಹೊಂದಿರುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT